ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ: ಅಧ್ಯಯನ ವರದಿ

Published 6 ಮೇ 2023, 12:45 IST
Last Updated 6 ಮೇ 2023, 12:45 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಲಸಿಕೆ ಪಡೆದ ನಂತರ ಕೆಲವರಲ್ಲಿ ಹೃದಯದ ಉರಿಯೂತ ಕಂಡುಬಂದಿದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿಗೆ ಕಾರಣವಾಗುವ ಜೀವಕೋಶಗಳ ಪ್ರತಿಕ್ರಿಯೆಯೇ ಇದಕ್ಕೆ ಕಾರಣವಾಗಿದ್ದು, ಲಸಿಕೆಯಿಂದಾಗಿ ಉತ್ಪತ್ತಿಯಾಗುವ ಪ್ರತಿಕಾಯಗಳಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಮೆರಿಕದ ಯೇಲ್ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, ‘ಸೈನ್ಸ್‌ ಇಮ್ಯುನಾಲಜಿ’ ಜರ್ನಲ್‌ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

‘ಕೋವಿಡ್‌ ಲಸಿಕೆ ಪಡೆದ ಕೆಲ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುವ ಜೊತೆಗೆ ಸೈಟೊಕಿನ್‌ ಎಂಬ ಪ್ರೋಟಿನ್‌ಗಳೂ ಸೃಷ್ಟಿಯಾಗುತ್ತವೆ. ದೇಹದಲ್ಲಿ ಉರಿಯೂತ ನಿಯಂತ್ರಣಕ್ಕೆ ಈ ಸೈಟೊಕಿನ್‌ಗಳು ನೆರವಾಗುತ್ತವೆ. ಆದರೆ, ಕೋವಿಡ್‌ ಲಸಿಕೆ ಪಡೆದ ಕೆಲವರಲ್ಲಿ ಈ ಪ್ರೋಟಿನ್‌ಗಳು ಅಧಿಕ ಪ್ರಮಾಣದಲ್ಲಿ ಹಾಗೂ ವೇಗವಾಗಿ ಉತ್ಪತ್ತಿಯಾಗುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಸಂಶೋಧಕರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ, ಕೋವಿಡ್‌ ಲಸಿಕೆ ಪಡೆದ ಕೆಲವರಲ್ಲಿ ‘ಮೈಯೊಕಾರ್ಡಿಟಿಸ್’ ಎಂಬ ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ಹೃದಯದ ಸ್ನಾಯುಗಳ ಉರಿಯೂತವೇ ಇದಕ್ಕೆ ಕಾರಣ. ಆದರೆ, ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ನಿಖರ ಕಾರಣಗಳು ಗೊತ್ತಾಗಿರಲಿಲ್ಲ. ಈಗ, ಯೇಲ್‌ ವಿ.ವಿ ಸಂಶೋಧಕರ ತಂಡವು ಲಸಿಕೆ ಪಡೆದವರಲ್ಲಿನ ರೋಗನಿರೋಧಕ ವ್ಯವಸ್ಥೆಯ ವಿಶ್ಲೇಷಣೆ ನಡೆಸಿ, ಹೃದಯದ ಸಮಸ್ಯೆಗೆ ಕಾರಣವನ್ನು ವಿವರಿಸಿದೆ.

‘ಆದಾಗ್ಯೂ, ಕೋವಿಡ್–19 ಸಂಬಂಧಿತ ಕಾಯಿಲೆಗಳ ವಿರುದ್ಧ ಲಸಿಕೆಯು ಪರಿಣಾಮಕಾರಿ ರಕ್ಷಣೆ ನೀಡುತ್ತದೆ’ ಎಂದು ಅಮೆರಿಕದ ವಿಶ್ವವಿದ್ಯಾಲಯದ ಇಮ್ಯುನೊಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಕೆರ‍್ರಿ ಲೂಕಾಸ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT