ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಗಾರ್ ಪರಿಷತ್ ಪ್ರಕರಣ: ಹೋರಾಟಗಾರ್ತಿ ಶೋಮಾ ಸೇನ್‌ಗೆ ಷರತ್ತುಬದ್ಧ ಜಾಮೀನು

Published 5 ಏಪ್ರಿಲ್ 2024, 10:59 IST
Last Updated 5 ಏಪ್ರಿಲ್ 2024, 10:59 IST
ಅಕ್ಷರ ಗಾತ್ರ

ನವದೆಹಲಿ: ಎಲ್ಗಾರ್ ಪರಿಷತ್ –ಮಾವೋವಾದಿ ಸಂಪರ್ಕಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಹೋರಾಟಗಾರ್ತಿ ಶೋಮಾ ಕಾಂತಿ ಸೇನ್‌ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿತು.  

ವಿಶೇಷ ಕೋರ್ಟ್‌ ಸೂಕ್ತ ಮತ್ತು ಸರಿಯಾದುದು ಎಂದು ಪರಿಗಣಿಸುವ ಷರತ್ತುಗಳಿಗೆ ಅನ್ವಯಿಸಿ ಶೋಮಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಆಗಸ್ಟೀನ್‌ ಜಾರ್ಜ್ ಮಸಿಹ್‌ ಅವರಿದ್ದ ಪೀಠವು ಆದೇಶಿಸಿತು.

ಶೋಮಾ ಕಾಂತಿ ಸೇನ್‌ ಅವರು ಇಂಗ್ಲಿಷ್ ಸಾಹಿತ್ಯದ ಪ್ರೋಫೆಸರ್ ಆಗಿದ್ದು, ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿದ್ದಾರೆ. ಅವರನ್ನು 2018ರ ಜೂನ್‌ 6ರಂದು ಬಂಧಿಸಲಾಗಿತ್ತು.

ವಿಶೇಷ ಕೋರ್ಟ್‌ನ ಅನುಮತಿಯಿಲ್ಲದೇ ಶೋಮಾ ಅವರು ಮಹಾರಾಷ್ಟ್ರ ರಾಜ್ಯದಿಂದ ಹೊರಗೆ ಹೋಗಬಾರದು ಎಂಬುದು ಷರತ್ತಿನ ಭಾಗವಾಗಿದೆ. ಜಾಮೀನು ಅವಧಿಯಲ್ಲಿ ತಾನು ವಾಸಿಸುವ ಸ್ಥಳದ ವಿಳಾಸವನ್ನು ಎನ್‌ಐಎ ನೀಡಬೇಕು. ಈ ಅವಧಿಯಲ್ಲಿ ಒಂದು ಮೊಬೈಲ್‌ ಫೋನ್‌ ಸಂಖ್ಯೆ ಮಾತ್ರ ಬಳಸಬಹುದು, ಅದರ ಮಾಹಿತಿಯನ್ನೂ ತನಿಖಾಧಿಕಾರಿಗೆ ನೀಡಬೇಕು ಎಂದು ಪೀಠ ಸೂಚಿಸಿತು.

ಅರ್ಜಿದಾರರು ಬಳಸುವ ಸಂಖ್ಯೆಯು ಮೊಬೈಲ್‌ ಫೋನ್‌ ಜಿಪಿಎಸ್‌ ಸೌಲಭ್ಯ ಹೊಂದಿರಬೇಕು. ದಿನದ 24 ಗಂಟೆ ಸಕ್ರಿಯವಾಗಿರಬೇಕು. ಲೋಕೇಷನ್ ಸ್ಟೇಟಸ್‌ ಕಾರ್ಯಾಚರಣೆಯಲ್ಲಿರಬೇಕು. ನಿರ್ದಿಷ್ಟ ಸ್ಥಳ ತಿಳಿಯಲು ಆಗುವಂತೆ ಈ ಮೊಬೈಲ್‌ ಸಂಖ್ಯೆಯನ್ನು ತನಿಖಾಧಿಕಾರಿಯ ಮೊಬೈಲ್‌ ಸಂಖ್ಯೆ ಜೊತೆಗೆ ಜೋಡಿಸಬೇಕು. ತನ್ನ ವಾಸ ಪ್ರದೇಶದ ಠಾಣೆಗೆ ವರದಿ ಮಾಡಿಕೊಳ್ಳಬಹುದು ಎಂದು ಪೀಠ ಹೇಳಿತು.

2017ರ ಡಿಸೆಂಬರ್ 31ರಂದು ಪುಣೆಯ ಶನಿವಾರ ವಾಡಾದಲ್ಲಿ ನಡೆದಿದ್ದ ಎಲ್ಗಾರ್ ಪರಿಷತ್‌ ಸಮ್ಮೇಳನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರ ಪರಿಣಾಮ ಮಾರನೇ ದಿನ ನಗರ ಹೊರವಲಯದ ಕೋರೆಗಾಂವ್ –ಭೀಮಾ ಯುದ್ದ ಸ್ಮಾರಕದ ಬಳಿ ಹಿಂಸೆಗೆ ಕಾರಣವಾಗಿತ್ತು ಎಂದು ಪೊಲೀಸರು ಆರೋಪಿಸಿದ್ದು, ಈ ಪ್ರಕರಣದ ಸಂಬಂಧ ಶೋಮಾ ಅವರನ್ನು ಬಂಧಿಸಲಾಗಿತ್ತು.

ಉಲ್ಲೇಖಿತ ಸಮ್ಮೇಳನಕ್ಕೆ ಮಾವೋವಾದಿಗಳ ಬೆಂಬಲವಿತ್ತು ಎಂದು ಪೊಲೀಸರು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದರು. ಬಳಿಕ ತನಿಖೆಯನ್ನು ರಾಷ್ಟ್ರ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಒಪ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT