ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಪ್ರಕರಣಗಳ ತಪ್ಪು ವ್ಯಾಖ್ಯಾನ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಒಪ್ಪಿತ ಲೈಂಗಿಕತೆ ಎಂದು ಬಣ್ಣಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಪಿಐಎಲ್‌ ಸಲ್ಲಿಕೆ
Published 26 ಆಗಸ್ಟ್ 2023, 15:26 IST
Last Updated 26 ಆಗಸ್ಟ್ 2023, 15:26 IST
ಅಕ್ಷರ ಗಾತ್ರ

ನವದೆಹಲಿ: 16–18 ವರ್ಷದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆ ಆಶಯಗಳಿಗೆ ವಿರುದ್ಧವಾಗಿ ‘ಸಮ್ಮತಿಯ ಲೈಂಗಿಕತೆ ಮತ್ತು ಮಧುರ ಬಾಂಧವ್ಯ’ ಎಂದು ಕೋರ್ಟ್‌ಗಳು ಮತ್ತು ತನಿಖಾ ಸಂಸ್ಥೆ ಬಣ್ಣಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ಕೇಂದ್ರ ಸರ್ಕಾರ ಹಾಗೂ ಮಕ್ಕಳ ಹಕ್ಕುಗಳ ಸಂರಕ್ಷಣೆಯ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಪಿಸಿಆರ್‌) ಈ ಸಂಬಂಧ ನೋಟಿಸ್‌ ಜಾರಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ, ಮನೋಜ್‌ ಮಿಶ್ರಾ ಅವರಿದ್ದ ಪೀಠ ಶುಕ್ರವಾರ ಆದೇಶಿಸಿತು.

ಎನ್‌ಜಿಒ ‘ಬಚ್‌ಪನ್‌ ಬಚಾವೊ ಆಂದೋಲನ್’ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಎನ್‌ಜಿಒ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಚ್‌.ಎಸ್.ಫೂಲ್ಕಾ ಅವರು, ‘ವಿವಿಧ ಕೋರ್ಟ್‌ಗಳು, ರಾಜ್ಯಗಳ ಪ್ರಾಧಿಕಾರಗಳು ಹಾಗೂ ತನಿಖಾ ಸಂಸ್ಥೆಗಳು ದೌರ್ಜನ್ಯ ಪ್ರಕರಣಗಳನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿವೆ. ಅನಗತ್ಯ, ಏಕಪಕ್ಷೀಯವಾದ, ಹುಡುಗಾಟದ ಅಭಿಪ್ರಾಯಗಳಿದ್ದು, ಇವು ಅಸೂಕ್ಷ್ಮತೆಯಿಂದ ಕೂಡಿದ್ದಾಗಿದೆ‘ ಎಂದು ಅರ್ಜಿಯಲ್ಲಿ ಗಮನಸೆಳೆದಿದ್ದರು.

ವ್ಯಕ್ತಿಯೊಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆಗೆ ವಿವಾಹ ಆಗಿರುವುದನ್ನು ಎತ್ತಿಹಿಡಿದಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ 2022ರ ಆದೇಶವನ್ನು ಪ್ರಶ್ನಿಸಿ ಎನ್‌ಸಿಪಿಸಿಆರ್‌ ಸಲ್ಲಿಸಿದ್ದ ಅರ್ಜಿಯ ಜೊತೆಗೆ ಈ ಮನವಿಯನ್ನು ಒಟ್ಟುಗೂಡಿಸಲು ಪೀಠವು ತೀರ್ಮಾನಿಸಿತು.

‘ಹದಿಹರೆಯದವರಿಗೆ ಸಂಬಂಧಿಸಿದ ಬಹುತೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಮ್ಮತಿಯ ಲೈಂಗಿಕತೆಯೇ ಆಗಿದ್ದು, ಪೋಕ್ಸೊ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂಬ ಅಭಿಪ್ರಾಯ ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಂಗ ವಲಯದಲ್ಲಿ ದಟ್ಟವಾಗುತ್ತಿದೆ. ಆದರೆ, ಇದು ವಾಸ್ತವಕ್ಕೆ ದೂರವಾದ ಸಂಗತಿಯಾಗಿದೆ. ಕೆಲ ಎನ್‌ಜಿಒಗಳು ಶೇ 60–70 ಪ್ರಕರಣಗಳು ಸಮ್ಮತಿಯ ಲೈಂಗಿಕತೆಯೇ ಆಗಿದೆ ಎಂದು ತಪ್ಪು ಚಿತ್ರಣ ನೀಡುತ್ತಿವೆ. ಇದು, ವಸ್ತುಸ್ಥಿತಿಯಿಂದ ತಪ್ಪಾಗಿದ್ದು, ತಪ್ಪುದಾರಿಗೆ ಎಳೆಯುವಂತದ್ದಾಗಿದೆ. ಈ ಪ್ರವೃತ್ತಿಯು ಮಕ್ಕಳ ಹಿತಾಸಕ್ತಿ ರಕ್ಷಣೆಗೆ ವಿರುದ್ಧವಾಗಿದ್ದು, ಭಾರತೀಯ ಕ್ರಿಮಿನಲ್‌ ನ್ಯಾಯವ್ಯವಸ್ಥೆ ವೈಫಲ್ಯಕ್ಕೂ ಕಾರಣವಾಗಲಿದೆ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. 

ಎನ್‌ಸಿಆರ್‌ಬಿ ದತ್ತಾಂಶಗಳನ್ನೂ ಉಲ್ಲೇಖಿಸಿರುವ ಅರ್ಜಿದಾರರು 2019–2021ರ ಅವಧಿಯಲ್ಲಿ ಪೋಕ್ಸೊ ಕಾಯ್ದೆಯ ಅನುಸಾರ ಒಟ್ಟು 1,50,061 ಸಂತ್ರಸ್ತರಿದ್ದಾರೆ. ಇವರಲ್ಲಿ ಸುಮಾರು 44,104 ಸಂತ್ರಸ್ತರ ವಯಸ್ಸು 16 ರಿಂದ 18 ಆಗಿದೆ ಎಂದು ಪೀಠದ ಗಮನಕ್ಕೆ ತಂದಿದ್ದಾರೆ.

ಪೋಕ್ಸೊ ಕಾಯ್ದೆಯ ಪ್ರಕರಣಗಳ ಸಮೀಕ್ಷೆ/ವಿಶ್ಲೇಷಣೆ ನಡೆಸುವಂತೆ ಎನ್‌ಸಿಪಿಸಿಆರ್‌ಗೆ ನಿರ್ದೇಶನ ನೀಡಬೇಕು ಹಾಗೂ ಸಂತ್ರಸ್ತರನ್ನು 30 ದಿನಗಳಲ್ಲಿ ಪರಿಶೀಲನೆಗೆ ಒಳಪಡಿಸುವಂತೆ ಮಾರ್ಗದರ್ಶಿ ನಿಯಮಗಳನ್ನು ಹೊರಡಿಸಬೇಕು ಎಂದು ಎನ್‌ಜಿಒ ಅರ್ಜಿಯಲ್ಲಿ ಮನವಿ ಮಾಡಿದೆ.

ಪರಸ್ಪರ ಸಮ್ಮತಿಯ ಪ್ರೇಮ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಆತುರಪಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿ ತಮಿಳುನಾಡು ಸರ್ಕಾರದ ಪೊಲೀಸ್‌ ಮಹಾನಿರ್ದೇಶಕರು 2022ರ ಡಿಸೆಂಬರ್ 3 ರಂದು ಹೊರಡಿಸಿರುವ ಸುತ್ತೋಲೆಯನ್ನು ರದ್ದುಪಡಿಸಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ದೇಶದಾದ್ಯಂತ ಪೋಕ್ಸೊ ಕಾಯ್ದೆ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳನ್ನು ಇತ್ಯರ್ಥಪಡಿಸುವಾಗ ಧರ್ಮೇಂದರ್‌ ಸಿಂಗ್ ಪ್ರಕರಣದಲ್ಲಿ (2020) ದೆಹಲಿ ಹೈಕೋರ್ಟ್‌ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲು ನಿರ್ದೇಶನ ನೀಡಬೇಕು ಅಥವಾ ಹೊಸದಾಗಿ ನಿಯಮಗಳನ್ನು ನಿಗದಿಪಡಿಸಬೇಕು ಎಂದು ಕೋರಲಾಗಿದೆ.

ಬಚ್‌ಪನ್‌ ಬಚಾವೋ ಆಂದೋಲನ್‌ ಸಂಸ್ಥೆಯ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಭುವನ್‌ ರಿಭು ಅವರು, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಾಗಿರುವ ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಮಾರ್ಗದರ್ಶಿ ನಿಯಮ ರೂಪಿಸಲು ಹಾದಿಯಾಗುತ್ತದೆ ಎಂಬ ಕಾರಣಕ್ಕಾಗಿ ಇದೊಂದು ಸ್ವಾಗತಾರ್ಹ ಬೆಳವಣಿಗೆ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT