ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾವತಿ ಮಾಜಿ ಕಾರ್ಯದರ್ಶಿಯಿಂದ ₹100 ಕೋಟಿ ತೆರಿಗೆ ವಂಚನೆ ಶಂಕೆ: ಐಟಿ ದಾಳಿ

ದೆಹಲಿ ಮತ್ತು ಲಖನೌನ 12 ಸ್ಥಳಗಳಲ್ಲಿ ತನಿಖೆ
Last Updated 12 ಮಾರ್ಚ್ 2019, 10:31 IST
ಅಕ್ಷರ ಗಾತ್ರ

ನವದೆಹಲಿ:ಬಹುಜನ ಸಮಾಜ ಪಾರ್ಟಿಯ ಮುಖ್ಯಸ್ಥೆ ಮಾಯಾವತಿ ಅವರ ಮಾಜಿ ಕಾರ್ಯದರ್ಶಿ ನೇತ್ರಮ್‌ ಅವರು ₹ 100 ಕೋಟಿ ತೆರಿಗೆ ವಂಚನೆ ಮಾಡಿರುವ ಶಂಕೆ ಸಂಬಂಧ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದೆಹಲಿ ಮತ್ತು ಲಖನೌನ 12 ಸ್ಥಳಗಲ್ಲಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ.

‘ನೇತ್ರಮ್‌ ಅವರ ಸಂಪತ್ತು ಗಳಿಕೆಯಲ್ಲಿ ₹ 100 ಕೋಟಿಯಷ್ಟು ತೆರಿಗೆ ವಂಚನೆ ಮಾಡಿರುವ ಅನುಮಾನಗಳಿದ್ದು ದಾಳಿ ನೆಡೆಸಲಾಗಿದೆ. ತೆರಿಗೆ ವಂಚನೆ ಮಾಡಿರುವುದನ್ನು ಪತ್ತೆ ಮಾಡಲಾಗುತ್ತಿದೆ. ಬೆಳಿಗ್ಗೆ ತನಿಖೆ ಆರಂಭಿಸಿದ್ದು, ಸಂಜೆಯವರೆಗೆ ನಡೆಯಬಹುದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ನಿವೃತ್ತ ಐಎಎಸ್‌ ಅಧಿಕಾರಿಯಾಗಿದ್ದ ನೇತ್ರಮ್‌, 2007 ಮತ್ತು 2012ರ ಮಧ್ಯೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅಧಿಕಾರಾವಧಿಯಲ್ಲಿ ಅವರಿಗೆ ಆಪ್ತರಾಗಿದ್ದರು ಎನ್ನಲಾಗಿದೆ.

ಜಾತಿಯಲ್ಲಿ ದಲಿತರಾಗಿರುವ ನೇತ್ರಮ್, ಕೃಷಿ ಇಲಾಖೆಯ ಪಧಾನ ಕಾರ್ಯದರ್ಶಿ, ಅಬಕಾರಿ, ಕಬ್ಬು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದರು.

ನಂತರ, ಅಖಿಲೇಶ್‌ ಯಾದವ್‌ 2012ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನೇತ್ರಮ್‌ ಅವರನ್ನು ಪ್ರಮುಖವಲ್ಲದ ಹುದ್ದೆಗಳಿಗೆ ವರ್ಗಾವಣೆ ಮಾಡಲಾಯಿತು. 2014ರಲ್ಲಿ ‘ಅಡ್ಮಿನಿಸ್ಟ್ರೇಷನ್‌ ಅಂಡ್‌ ಮ್ಯಾನೇಜ್ಮೆಂಟ್‌ ಅಕಾಡೆಮಿ’ಯ ಮುಖ್ಯ ನಿರ್ದೇಶಕರಾಗಿ ನಿವೃತ್ತರಾದರು.

ಉತ್ತರ ಪ್ರದೇಶದಲ್ಲಿ ಮಾಯಾವತಿ ಆಡಳಿತ ಅವಧಿಯಲ್ಲಿ ನಿರ್ಮಿಸಲಾದ ಆನೆಗಳು ಮತ್ತು ಬಿಎಸ್‌ಪಿ ಚಿಹ್ನೆಗಳ ಕುರಿತು ಜಾರಿ ನಿರ್ದೇಶನಾಲಯ ಪರಿಶೀಲನೆ ಕೈಗೊಂಡಿದೆ. ಈ ಸಂಬಂಧ ತನಿಖಾ ಸಂಸ್ಥೆ ಲಖನೌನ ಆರು ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಎದುರಾಳಿಗಳನ್ನು ಗುರಿಯಾಗಿಸಲು ಮತ್ತು ವಿರೋಧ ಪಕ್ಷಗಳ ‘ಮಹಾಮೈತ್ರಿ’ಯನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಇಬ್ಬರು ನಾಯಕರು ಆರೋಪ ಮಾಡಿದ್ದಾರೆ.

‘ಕೀಳು ರಾಜಕೀಯ ಮತ್ತು ರಾಜಕೀಯ ಪಿತೂರಿ ಬಿಜೆಪಿಗೆ ಹೊಸದೇನಲ್ಲ. ದೇಶದ ಜನರು ಅದನ್ನು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಮಾಯಾವತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT