ಠಾಣೆ: ತನ್ನ ಮೊಬೈಲ್ ಫೋನ್‌ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೊಗಳನ್ನು ತೋರಿಸಿದ್ದಕ್ಕಾಗಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿ ಸಿವಿಲ್ ಶಾಲೆಯ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಆರೋಪಿಯನ್ನು ಮುಜಮ್ಮಿಲ್ ಎಂದು ಗುರುತಿಸಲಾಗಿದ್ದು, ಆತನನ್ನು ಬುಧವಾರ ಬಂಧಿಸಲಾಗಿದೆ. ಬಾಲಕಿಯೊಬ್ಬಳು ತನ್ನ ಪೋಷಕರಿಗೆ ವಿಷಯ ತಿಳಿಸಿದ್ದರಿಂದ ಆತನ ಕೃತ್ಯ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
‘7ನೇ ತರಗತಿಯ ವಿದ್ಯಾರ್ಥಿನಿ ಶಾಲೆಗೆ ನಿಯಮಿತವಾಗಿ ತಡವಾಗಿ ಹೋಗುತ್ತಿದ್ದಳು. ಹೀಗೆ ಯಾಕೆ ಆಗುತ್ತಿದೆ ಎಂದು ತಿಳಿಯಲು ಶಾಲೆಯ ಮುಖ್ಯೋಪಾಧ್ಯಾಯರು ಆಕೆಯ ಪೋಷಕರಿಗೆ ಕರೆ ಮಾಡಿದರು. ಆದರೆ, ಆ ಸಮಯದಲ್ಲಿ ಬಾಲಕಿ ಈ ಬಗ್ಗೆ ಅವರಿಗೆ ಏನನ್ನೂ ಹೇಳಿರಲಿಲ್ಲ’ ಎಂದು ಶಾಂತಿ ನಗರ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್ ವಿನಾಯಕ ಗಾಯಕವಾಡ್ ತಿಳಿಸಿದ್ದಾರೆ.
ಶಿಕ್ಷಕನೊಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ಅವಳಿಗೆ ಅಶ್ಲೀಲ ವಿಡಿಯೊಗಳನ್ನು ತೋರಿಸಿದ್ದು ಮತ್ತು ಅವಳೊಂದಿಗೆ ಅನುಚಿತವಾಗಿ ವರ್ತಿಸಿದಾಗಿನಿಂದ ಶಾಲೆಗೆ ಹೋಗಲು ಇಷ್ಟವಿಲ್ಲ ಎಂದು ಮನೆಗೆ ಮರಳಿದ ನಂತರ ಬಾಲಕಿಯು ಪೋಷಕರಿಗೆ ತಿಳಿಸಿದ್ದಾಳೆ.
ಇತರ ಕೆಲವು ವಿದ್ಯಾರ್ಥಿನಿಯರಿಗೂ ಶಿಕ್ಷಕ ಅದೇ ರೀತಿ ಮಾಡಿದ್ದಾನೆ ಎಂದು ಬಾಲಕಿ ಹೇಳಿದ್ದು, ನಂತರ ಆಕೆಯ ಪೋಷಕರು ಪೊಲೀಸರನ್ನು ಸಂಪರ್ಕಿಸಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ. ಶಿಕ್ಷಕನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.