ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮೂಹಿಕ ಪ್ರಯತ್ನದಿಂದಷ್ಟೇ ದೆಹಲಿ ವಾಯುಮಾಲಿನ್ಯ ನಿಯಂತ್ರಣ ಸಾಧ್ಯ: ಪರಿಸರ ಸಚಿವ

Published 1 ಸೆಪ್ಟೆಂಬರ್ 2024, 11:29 IST
Last Updated 1 ಸೆಪ್ಟೆಂಬರ್ 2024, 11:29 IST
ಅಕ್ಷರ ಗಾತ್ರ

ನವದೆಹಲಿ: ಸಾಮೂಹಿಕ ಪ್ರಯತ್ನದಿಂದಷ್ಟೇ ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಸಾಧ್ಯ ಎಂದು ಪರಿಸರ ಸಚಿವ ಗೋಪಾಲ್‌ ರಾಯ್‌ ಹೇಳಿದ್ದಾರೆ. ಚಳಿಗಾಲದಲ್ಲಿ ವಾಯು ಗುಣಮಟ್ಟ ಕುಸಿದ ಸಂದರ್ಭದಲ್ಲಿ ಕೃತಕವಾಗಿ ಮಳೆ ಸುರಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಯ್‌, ಸಮಸ್ಯೆ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ರಾಷ್ಟ್ರ ರಾಜಧಾನಿ ಹಾಗೂ ಸುತ್ತಲ ಪ್ರದೇಶದಲ್ಲಿ ನವೆಂಬರ್‌ನಲ್ಲಿ ವಾಯುಮಾಲಿನ್ಯ ಉಲ್ಬಣಿಸುತ್ತದೆ ಎಂದು ಹೇಳಿದ್ದಾರೆ.

'ದೆಹಲಿ, ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ತುರ್ತುಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಾಲಿನ್ಯ ನಿಯಂತ್ರಿಸಲು ಕೇಜ್ರಿವಾಲ್‌ ಸರ್ಕಾರ ಶ್ರಮಿಸುತ್ತಿದೆ. ನಮ್ಮ (ಎಎಪಿ) ಸರ್ಕಾರ ಅಧಿಕಾರಕ್ಕೇರಿದ ನಂತರ ಮಾಲಿನ್ಯ ಪ್ರಮಾಣ ಕುಸಿದಿದೆ' ಎಂದಿರುವ ಅವರು, 'ಆದಾಗ್ಯೂ, ವಿಪರೀತ ಮಾಲಿನ್ಯ ಪರಿಸ್ಥಿತಿಗೆ ನವೆಂಬರ್‌ ಸಾಕ್ಷಿಯಾಗುತ್ತಿದೆ' ಎಂದು ತಿಳಿಸಿದ್ದಾರೆ.

'ಕಳೆದ ವರ್ಷ ಕಾನ್ಪುರ ಐಐಟಿ, ದೆಹಲಿಯಲ್ಲಿ ಕೃತಕ ಮಳೆ ಅಥವಾ ಮೋಡಬಿತ್ತನೆ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು. ಹಣಕಾಸು ನಿರ್ವಹಣೆ ಮತ್ತು ಭದ್ರತೆಯ ಖಾತ್ರಿ ಅಗತ್ಯವಿದೆ ಎಂದಿತ್ತು. ಕಳೆದ ಸಲ ಸಾಕಷ್ಟು ಸಮಯ ಇರಲಿಲ್ಲವಾದ್ದರಿಂದ, ಅನುಮತಿ ದೊರೆತಿರಲಿಲ್ಲ' ಎಂದಿದ್ದಾರೆ.

'ತಜ್ಞರೊಂದಿಗೆ ಸಭೆ ನಡೆಸಿ, ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರಿಗೆ ಪತ್ರ ಬರೆದಿದ್ದೇವೆ. ಕೇಂದ್ರದ ಸಹಕಾರ ಕೋರಿದ್ದೇವೆ' ಎಂದಿರುವ ಸಚಿವ, 'ಕೃತಕ ಮಳೆ ಪ್ರಸ್ತಾವನೆ ಸಂಬಂಧ ಕಾನ್ಪುರ ಐಐಟಿ ತಜ್ಞರೊಂದಿಗೆ ಸಭೆ ನಡೆಸುವಂತೆ ಒತ್ತಾಯಿಸಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ.

'ದೆಹಲಿಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲು ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ, ದೆಹಲಿ ಸರ್ಕಾರ, ವಿಮಾನಯಾನ ಪ್ರಾಧಿಕಾರ, ಹವಾಮಾನ ಇಲಾಖೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಉತ್ತರ ಪ್ರದೇಶ ಸರ್ಕಾರ ಮತ್ತು ಇತರ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಅಗತ್ಯ. ನಮ್ಮ ಕಡೆಯಿಂದ ಹಣ ಮತ್ತು ಅನುಮತಿ ನೀಡಲು ಸಿದ್ಧರಿದ್ದೇವೆ. ಕೇಂದ್ರದ ಸಹಕಾರವೂ ಬೇಕು' ಎಂದು ಹೇಳಿಕೊಂಡಿದ್ದಾರೆ.

ವಾಯುಮಾಲಿನ್ಯ ನಿಯಂತ್ರಿಸಲು ಸಾಮೂಹಿಕ ಪ್ರಯತ್ನ ಮತ್ತು ಕೇಂದ್ರ ಸರ್ಕಾರ, ಪಕ್ಕದ ರಾಜ್ಯಗಳ ಸಹಕಾರ ಅತ್ಯಗತ್ಯ ಎಂದು ಇದೇವೇಳೆ ಒತ್ತಿ ಹೇಳಿದ್ದಾರೆ.

ಕೇಂದ್ರ ಸಚಿವ ಯಾದವ್ ಅವರಿಗೆ ಕಳೆದವಾರ ಪತ್ರ ಬರೆದಿರುವ ರಾಯ್‌, ಚಳಿಗಾಲದಲ್ಲಿ ವಾಯುಮಾಲಿನ್ಯ ನಿಯಂತ್ರಿಸುವುದಕ್ಕಾಗಿ ಕೃತಕ ಮಳೆ ಸುರಿಸುವುದು ಅತ್ಯಗತ್ಯ. ಇದಕ್ಕಾಗಿ ಮೋಡಬಿತ್ತನೆ ನಡೆಸುವ ವಿಚಾರವಾಗಿ ಸಂಬಂಧಪಟ್ಟ ಸರ್ಕಾರ, ಸಂಸ್ಥೆಗಳೊಂದಿಗೆ ಸಭೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT