ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಶೆಲ್‌

Published 14 ಫೆಬ್ರುವರಿ 2024, 15:52 IST
Last Updated 14 ಫೆಬ್ರುವರಿ 2024, 15:52 IST
ಅಕ್ಷರ ಗಾತ್ರ

ಚಂಡೀಗಢ (ಪಿಟಿಐ): ಪಂಜಾಬ್‌ನ ರೈತರ ಮೇಲೆ ಹರಿಯಾಣದ ಭದ್ರತಾ ಸಿಬ್ಬಂದಿ ಶಂಭು ಗಡಿಯಲ್ಲಿ ಅಶ್ರುವಾಯು ಶೆಲ್ ಸಿಡಿಸಿದ್ದಾರೆ. ಪಂಜಾಬ್ ಮತ್ತು ಹರಿಯಾಣದ ನಡುವಿನ ಗಡಿ ಪ್ರದೇಶ ಇದು. ‘ದೆಹಲಿ ಚಲೋ’ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತರು ಬುಧವಾರವೂ ಈ ಗಡಿಯಲ್ಲಿಯೇ ಉಳಿದುಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ತೊಡಗಿರುವ ರೈತರು ಬ್ಯಾರಿಕೇಡ್ ಕಡೆ ಸಾಗಲು ಯತ್ನಿಸಿದಾಗಲೆಲ್ಲ ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದ್ದಾರೆ. ಕೆಲವು ರೈತರು ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ರೈತರ ಮೇಲೆ ಕಣ್ಣಿಡಲು ಪೊಲೀಸರು ಡ್ರೋನ್ ಮೊರೆ ಹೋಗಿದ್ದಾರೆ.

ಡ್ರೋನ್‌ಗಳನ್ನು ಕೆಳಕ್ಕೆ ಉರುಳಿಸುವ ಉದ್ದೇಶದಿಂದ ಕೆಲವು ಯುವಕರು ಗಾಳಿಪಟ ಹಾರಿಸಿದರು. ಗಾಳಿಪಟದ ಸೂತ್ರಕ್ಕೆ ಡ್ರೋನ್ ಸಿಲುಕಬೇಕು, ಅದು ಕೆಳಕ್ಕೆ ಉರುಳಬೇಕು ಎಂಬುದು ಅವರ ಉದ್ದೇಶವಾಗಿತ್ತು.

ಹರಿಯಾಣದ ಜಿಂದ್ ಜಿಲ್ಲೆಯ ದಾತಾ ಸಿಂಹವಾಲಾ – ಖನೌರಿ ಗಡಿಯಲ್ಲಿ ಕೂಡ ರೈತರು ಕುಳಿತಿದ್ದಾರೆ. ರೈತರು ಟ್ರ್ಯಾಕ್ಟರ್‌ಗಳಲ್ಲಿ ದೆಹಲಿಗೆ ತೆರಳುವುದನ್ನು ತಡೆಯಲು ಈ ಗಡಿಯಲ್ಲಿ ಹರಿಯಾಣ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.

ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ನ ಹಲವು ಕಡೆಗಳಿಂದ ರೈತರು ಶಂಭು ಗಡಿಗೆ ಬಂದಿದ್ದಾರೆ. ಪಂಜಾಬ್‌ನ ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಲಾಗಿದೆ. 

ಬೇಡಿಕೆಗಳ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲು ಸಿದ್ಧ ಎಂದು ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯನ್ನು ತಾವು ಪ್ರವೇಶಿಸುವುದಾಗಿ ರೈತರು ದೃಢವಾಗಿ ಹೇಳಿದ್ದಾರೆ. ಅಶ್ರುವಾಯು ಶೆಲ್‌ನ ಪ್ರಭಾವನ್ನು ತಗ್ಗಿಸುವುದಕ್ಕಾಗಿ ರೈತರು ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ, ಒದ್ದೆ ಬಟ್ಟೆ ಹಾಗೂ ನೀರಿನ ಬಾಟಲಿಗಳನ್ನು ಇಟ್ಟುಕೊಂಡಿದ್ದಾರೆ. 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡುತ್ತದೆ. ಆದರೆ ರೈತರಿಗೆ ಅವರಿಗೆ ಬೇಕಿರುವುದನ್ನು ಕೊಡುವುದಿಲ್ಲ. ರೈತರು ಕೇಳುತ್ತಿರುವುದು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿಯನ್ನು ಮಾತ್ರ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ರೈತರೊಬ್ಬರು ಹೇಳಿದರು.

ಪೊಲೀಸರು ರೈತರ ಮೇಲೆ ಅಶ್ರುವಾಯು ಸೆಲ್ ಸಿಡಿಸಿದ ಪರಿಣಾಮವಾಗಿ ಹಲವು ರೈತರು ಗಾಯಗೊಂಡಿದ್ದಾರೆ. ಸರ್ಕಾರವು ಇಂತಹ ಕೆಲಸಗಳನ್ನು ನಿಲ್ಲಿಸಬೇಕು. ಮಾತುಕತೆಗೆ ರೈತರು ಸಿದ್ಧರಿದ್ದಾರೆ ಎಂದು ರೈತ ಮುಖಂಡ ಸರವಣ್ ಸಿಂಗ್ ಪಂಡೇರ್ ಹೇಳಿದರು. ಕೇಂದ್ರವು ರೈತರನ್ನು ಮಾತುಕತೆಗೆ ಕರೆಯಲಿದೆ ಎಂದು ಹೇಳಲಾಗುತ್ತಿದೆ. ಮಾತುಕತೆಗೆ ಆಹ್ವಾನ ಬಂದರೆ ಅದನ್ನು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದರು. ‘ನಾವು ಇಲ್ಲಿ ಸರ್ಕಾರದ ಹೊತೆ ಸಂಘರ್ಷ ನಡೆಸಲು ಬಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT