ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ ಸಂಸ್ಥಾಪನಾ ದಿನ ಆಚರಣೆ: ನಾಡಗೀತೆ ಅನಾವರಣ ಮಾಡಿದ ಸಿ.ಎಂ ರೆಡ್ಡಿ

Published 2 ಜೂನ್ 2024, 16:06 IST
Last Updated 2 ಜೂನ್ 2024, 16:06 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ರಾಜ್ಯದ ಸಂಸ್ಥಾಪನಾ ದಿನ ಸಮಾರಂಭ ಭಾನುವಾರ ಸಂಭ್ರಮದಿಂದ ನಡೆಯಿತು. ಅನಾರೋಗ್ಯದ ಕಾರಣ ನೀಡಿ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಶುಭ ಹಾರೈಸಿ ಕಳುಹಿಸಿದ್ದ ವಿಡಿಯೊ ಸಂದೇಶವನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಿದ್ದ ಸರ್ಕಾರದ ಕ್ರಮಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮರ್ಥಿಸಿಕೊಂಡಿದ್ದರು.

ತಮ್ಮ ಭಾಷಣದಲ್ಲೂ ಇದನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ‘ಚರಿತ್ರೆಯಲ್ಲಿ ತೆಲಂಗಾಣ ಇರುವಷ್ಟು ಕಾಲ ಈ ಸಮಾಜ ಸೋನಿಯಾಗಾಂಧಿ ಅವರಿಗೆ ತಾಯಿ ಸ್ಥಾನದ ಗೌರವ ನೀಡಲಿದೆ’ ಎಂದರು. ‘ಭಾರತೀಯ ಸಮಾಜವು ಯಾವ ಆಧಾರದಲ್ಲಿ ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಗುರುತಿಸುತ್ತದೆ’ ಎಂದು ಪ್ರಶ್ನಿಸುವ ಮೂಲಕ ಅವರು ತಮ್ಮ ಈ ಮಾತನ್ನು ಸಮರ್ಥಿಸಿಕೊಂಡರು.

ಸೋನಿಯಾ ಗಾಂಧಿ ತಮ್ಮ ಸಂದೇಶದಲ್ಲಿ,  ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಕರೀಂನಗರದಲ್ಲಿ 2004ರಲ್ಲಿ ನೀಡಿದ್ದ ಭರವಸೆಯನ್ನು ಉಲ್ಲೇಖಿಸಿ, ‘ರಾಜ್ಯದ ಕಾಂಗ್ರೆಸ್‌ ಸರ್ಕಾರವು, ಪಕ್ಷದ ಎಲ್ಲ ಆರು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸಲಿದೆ’ ಎಂದು ತಿಳಿಸಿದರು. 

ಇದೇ ವೇಳೆ ರೇವಂತರೆಡ್ಡಿ ಅವರು, ಕವಿ ಅಂದೇಶ್ರಿ ಅವರು ರಚಿಸಿ, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಸಂಯೋಜಿಸಿರುವ ‘ಜಯ ಜಯ ಹೇ ತೆಲಂಗಾಣ..’ ನಾಡಗೀತೆಯನ್ನು ಬಿಡುಗಡೆಗೊಳಿಸಿದರು. ಗನ್‌ಪಾರ್ಕ್‌ನಲ್ಲಿದ್ದ ಹುತಾತ್ಮರ ಸ್ಮಾರಕಕ್ಕೂ ಬಳಿಕ ನಮನ ಸಲ್ಲಿಸಿದರು.

ಪ್ರತಿಪಕ್ಷ ಬಿಆರ್‌ಎಸ್‌ ಪ್ರತ್ಯೇಕವಾಗಿ ಸ್ಥಾಪನಾ ದಿನ ಆಚರಿಸಿತು. ಅಧಿಕೃತ ಕಾರ್ಯಕ್ರಮಕ್ಕೆ ನೀಡಿದ್ದ ಆಹ್ವಾನವನ್ನು ಬಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರರಾವ್ ನಿರಾಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT