ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ತೂಫಾನ್‌ಗೆ ತೆಲಂಗಾಣ ಸಾಕ್ಷಿಯಾಗಲಿದೆ: ರಾಹುಲ್ ಗಾಂಧಿ

Published 17 ನವೆಂಬರ್ 2023, 11:08 IST
Last Updated 17 ನವೆಂಬರ್ 2023, 11:08 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯು ತಮ್ಮ ಪಕ್ಷಕ್ಕೆ ಬೆಂಬಲದ ತೂಫಾನ್‌ಗೆ ಸಾಕ್ಷಿಯಾಗಲಿದೆ. ಆಡಳಿತಾರೂಢ ಬಿಆರ್‌ಎಸ್ ಹೀನಾಯವಾಗಿ ಸೋಲಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಖಮ್ಮಂ ಜಿಲ್ಲೆಯ ಪಿನಪಾಕದಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಆರ್‌ಎಸ್‌ನ ಭ್ರಷ್ಟಾಚಾರ ರಾಜ್ಯದಾದ್ಯಂತ ಕಾಣುತ್ತಿದೆ ಎಂದು ಆರೋಪಿಸಿದರು. ತೆಲಂಗಾಣದಲ್ಲಿ ಜನಪರ ಸರ್ಕಾರ ಮಾಡುವುದು ಕಾಂಗ್ರೆಸ್‌ನ ಮೊದಲ ಗುರಿ. ತದ ನಂತರ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮ ಗುರಿ ಎಂದು ಹೇಳಿದರು. ತೆಲಂಗಾಣದಲ್ಲಿ ಕಾಂಗ್ರೆಸ್ 'ತೂಫಾನ್' ಬರಲಿದೆ ಎಂದು ಕೆಸಿಆರ್‌ಗೆ ತಿಳಿದಿದೆ. ಕೆಸಿಆರ್ ಮತ್ತು ಅವರ ಪಕ್ಷ ಕಾಣದಂತಹ ಬಿರುಗಾಳಿ ರಾಜ್ಯದಲ್ಲಿ ಬೀಸಲಿದೆ ಎಂದು ರಾಹುಲ್ ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕೇಳುತ್ತಾರೆ. ಮುಖ್ಯಮಂತ್ರಿಗಳೇ, ನೀವು ಓದಿದ ಶಾಲೆ, ಕಾಲೇಜು ಕಾಂಗ್ರೆಸ್ ಮಾಡಿದ್ದು. ನೀವು ಓಡಾಡುತ್ತಿರುವ ರಸ್ತೆಗಳನ್ನು ನಿರ್ಮಿಸಿದ್ದು ಕಾಂಗ್ರೆಸ್. ತೆಲಂಗಾಣದ ಯುವಕರ ಬೆಂಬಲದಿಂದ ಕಾಂಗ್ರೆಸ್ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು ಎಂದು ರಾಹುಲ್ ಹೇಳಿದ್ದಾರೆ. ತೆಲಂಗಾಣ ರಾಜ್ಯ ರಚನೆಯ ಭರವಸೆಯನ್ನು ಈಡೇರಿಸಿದ್ದು, ಹೈದರಾಬಾದ್ ಅನ್ನು ವಿಶ್ವದ ಐಟಿ ರಾಜಧಾನಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಎಂದು ಅವರು ಹೇಳಿದ್ದಾರೆ.

ಊಳಿಗಮಾನ್ಯ ಪದ್ಧತಿಯ ತೆಲಂಗಾಣ ಮತ್ತು ಸಾಮಾನ್ಯ ಜನರ ತೆಲಂಗಾಣದ ನಡುವಿನ ಹೋರಾಟ ಈ ಚುನಾವಣೆ. ಮದ್ಯ, ಮರಳು ಸೇರಿದಂತೆ ಹಣ ಮಾಡುವ ಎಲ್ಲ ಇಲಾಖೆಗಳು ಸಿಎಂ ಕುಟುಂಬದ ಕೈಯಲ್ಲಿವೆ ಎಂದು ರಾಹುಲ್ ಆರೋಪಿಸಿದ್ದಾರೆ.

ತೆಲಂಗಾಣ ಜನರ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸಿರುವುದನ್ನು ಜನ ನೋಡಿದ್ದಾರೆ. ಕೆಸಿಆರ್ ಒಂದು ಕುಟುಂಬದ ಕನಸನ್ನು ಮಾತ್ರ ಈಡೇರಿಸುತ್ತಿದ್ದಾರೆ. ಕಾಳೇಶ್ವರಂ ಯೋಜನೆಯ ಮೂಲೆ ಮೂಲೆಯಲ್ಲೂ ಕೆಸಿಆರ್‌ ಭ್ರಷ್ಟಾಚಾರದ ಗುರುತುಗಳನ್ನು ಕಾಣಬಹುದು. ಯೋಜನೆಯ ಹೆಸರಲ್ಲಿ ₹1 ಲಕ್ಷ ಕೋಟಿ ಹಣವನ್ನು ಕೆಸಿಆರ್ ಲೂಟಿ ಮಾಡಿದ್ದಾರೆ ಎಂದು ರಾಹುಲ್ ಗುಡುಗಿದ್ದಾರೆ.

ಕಾಳೇಶ್ವರಂ ಯೋಜನೆಯ ಮೇಡಿಗಡ್ಡ ಬ್ಯಾರೇಜ್‌ನ ಕಂಬಗಳು ಮುಳುಗಡೆಯಾಗಿರುವ ವರದಿಗಳ ಹಿನ್ನೆಲೆಯಲ್ಲಿ ರಾಹುಲ್ ಅವರು ಇತ್ತೀಚೆಗೆ ಬ್ಯಾರೇಜ್‌ಗೆ ಭೇಟಿ ನೀಡಿದ್ದರು.

ನರ್‍ಸಂಪೇಟ್‌ನಲ್ಲಿ ಮತ್ತೊಂದು ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್‌, ಬಿಆರ್‌ಎಸ್‌ ಸರ್ಕಾರ ರೈತರಿಂದ ಭೂಮಿಯನ್ನು ಕಸಿದುಕೊಂಡಿದೆ ಎಂದು ಆಪಾದಿಸಿದರು. ಅವಿಭಜಿತ ಆಂಧ್ರಪ್ರದೇಶದಲ್ಲಿ ರೈತರಿಗೆ ಕಾಂಗ್ರೆಸ್‌ ಉಚಿತ ವಿದ್ಯುತ್‌ ಪೂರೈಸಿತ್ತು. ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ಉಚಿತ ವಿದ್ಯುತ್ ಪೂರೈಕೆಯನ್ನು ಮುಂದುವರಿಸುವುದಾಗಿ ಹೇಳಿದರು.

ಬಿಆರ್‌ಎಸ್‌, ಬಿಜೆಪಿ ಮತ್ತು ಅಸಾದುದ್ದೀನ್‌ ಓವೈಸಿ  ನೇತೃತ್ವದ ಎಐಎಂಐಎಂ ಒಗ್ಗೂಡಿ ಕಾರ್ಯ ನಿರ್ವಹಿಸುತ್ತಿವೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT