ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಕಣ: ಪಕ್ಷಗಳ ಭರ್ಜರಿ ರ‍್ಯಾಲಿ

Published 9 ನವೆಂಬರ್ 2023, 16:03 IST
Last Updated 9 ನವೆಂಬರ್ 2023, 16:03 IST
ಅಕ್ಷರ ಗಾತ್ರ

ನಾಮಪತ್ರ ಸಲ್ಲಿಸಿದ ಕೆಸಿಆರ್‌:

ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್ (ಕೆಸಿಆರ್‌) ಅವರು ಸಿದ್ದಿಪೇಟ್‌ ಜಿಲ್ಲೆಯ ಗಜ್ವೆಲ್‌ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಹೆಲಿಕಾಪ್ಟರ್‌ ಮೂಲಕ ಗಜ್ವೆಲ್‌ಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಬಳಿಕ, ತೆರೆದ ವಾಹನದಲ್ಲಿ ಕ್ಷೇತ್ರ ಸಂಚಾರ ನಡೆಸಿದರು. ಬಿಜೆಪಿಯು ಪಕ್ಷದ ಶಾಸಕ ಈಟಲ ರಾಜೇಂದ್ರ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದರೆ, ಕಾಂಗ್ರೆಸ್‌ ಪಕ್ಷವು ತೂಂಕುಂಟ ನರ್ಸಾ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಕೆಸಿಆರ್‌ ಅವರು ಕಾಮಾರೆಡ್ಡಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದು, ಅಲ್ಲಿಯೂ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಹಿಂಪಡೆದ ಬಿಜೆಪಿ ಬಂಡಾಯ ಅಭ್ಯರ್ಥಿ:

ಜೈಪುರದ ಜೋತ್ವಾರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ರಾಜ್‌ಪಾಲ್‌ ಸಿಂಗ್‌ ಶೆಖಾವತ್‌ ಅವರು ಗುರುವಾರ ನಾಮಪತ್ರವನ್ನು ಹಿಂಪಡೆದಿದ್ದಾರೆ. ಕಾಂಗ್ರೆಸ್‌ಅನ್ನು ಸೋಲಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಬಹಳ ಮುಖ್ಯ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಬಳಿಕ ಈ ನಿರ್ಧಾರ ತೆಗೆದುಕೊಂಡೆ ಎಂದು ರಾಜ್‌ಪಾಲ್‌ ಅವರು ಹೇಳಿದ್ದಾರೆ.

‘ಬಿಜೆಪಿ ಜೊತೆ ಒಪ್ಪಂದ ಇಲ್ಲ’:

ಬಿಆರ್‌ಎಸ್‌ ಪಕ್ಷವು ತೆಲಂಗಾಣ ಜನರ ‘ಎ’ ಟೀಮ್‌ ಹೊರತು ಬೇರೆ ಯಾವ ಪಕ್ಷದ ‘ಬಿ’ ಟೀಮ್‌ ಅಲ್ಲ ಎಂದು ಪಕ್ಷದ ಹಿರಿಯ ನಾಯಕ ಕೆ.ಟಿ. ರಾಮರಾವ್‌ ಅವರು ಹೇಳಿದ್ದಾರೆ. ಬಿಆರ್‌ಎಸ್‌ ಪಕ್ಷವು ಬಿಜೆಪಿಯ ‘ಬಿ’ ಟೀಮ್‌ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾಡಿರುವ ಟೀಕೆಗೆ ಹೀಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಜೊತೆ ಯಾವ ರೀತಿಯ ಒಪ್ಪಂದವನ್ನೂ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಕಾಂಗ್ರೆಸ್‌ನಿಂದ ದಿವಾಳಿ:

ರಾಜಸ್ಥಾನವನ್ನು ದಿವಾಳಿ ಮಾಡುವ ಖಾತರಿಯನ್ನು ಕಾಂಗ್ರೆಸ್‌ ನೀಡಿದೆ. ರಾಜ್ಯ ಸರ್ಕಾರದ ಬೊಕ್ಕಸವನ್ನು ಬರಿದು ಮಾಡಿದೆ. ವೇತನ, ಪಿಂಚಣಿ ನೀಡಲೂ ಸರ್ಕಾರದ ಬಳಿ ಹಣವಿಲ್ಲ ಎಂದು ಬಿಜೆಪಿ ವಕ್ತಾರ ಶೆಹ್ಜಾದ್‌ ಪೂನಾವಾಲ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಅಭಿವೃದ್ಧಿಗೆ ಹಣ ಉಳಿದಿಲ್ಲ ಎಂದರೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಒಪ್ಪಿಕೊಂಡಿದೆ ಎಂದರು. ಅಭಿವೃದ್ಧಿ, ಉತ್ತಮ ಆಡಳಿತ, ಮೂಲಭೂತ ಸೌಕರ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಉತ್ತಮಪಡಿಸುವ ಭರವಸೆಯನ್ನು ಬಿಜೆಪಿ ನೀಡಿದೆ ಎಂದರು.

ಪ್ರಿಯಾಂಕಾ ರ‍್ಯಾಲಿ: ‘ಚಿತ್ರಕೂಟವು ಶ್ರೀರಾಮ ಪ್ರಾಯಶ್ಚಿತ್ತ ಮಾಡಿಕೊಂಡ ಸ್ಥಳ. ಸತ್ಯ ಗೆಲ್ಲುತ್ತದೆ, ಸುಳ್ಳು ಸೋಲುತ್ತದೆ ಎಂಬ ನಂಬಿಕೆಯು ರಾಮನ ಕಾಲದಿಂದಲೂ ಈ ದೇಶದಲ್ಲಿ ಇದೆ. ಬಿಜೆಪಿಯನ್ನು ಸೋಲಿಸುವ ಮೂಲಕ ಸುಳ್ಳನ್ನು ಸೋಲಿಸಿ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಹೇಳಿದರು.

‘ಮಧ್ಯಪ್ರದೇಶದಲ್ಲಿ ಭಾರಿ ಅಭಿವೃದ್ಧಿ ಮಾಡಿರುವುದಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಹೇಳುತ್ತಾರೆ. ಆದರೆ ಆ ಅಭಿವೃದ್ಧಿಯು ನಿಮಗೆ ಅನುಭವಕ್ಕೆ ಬಂದಿದೆಯೇ’ ಎಂದು ಪ್ರಶ್ನಿಸಿದರು.

‘ಮತ್ತೆ ಅಧಿಕಾರಕ್ಕೆ’:

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಬಾರಾನ್‌ನ ಅಂತಾ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪ್ರಮೋದ್‌ ಜೈನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಪಕ್ಷವು ರಾಜ್ಯದಲ್ಲಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಬಾರಾನ್‌ನಲ್ಲಿ ಪ್ರಚಾರ ಕಾರ್ಯದ ವೇಳೆ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT