ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Telangana Election: ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್, ಭರವಸೆಗಳು ಇಂತಿವೆ

Published 17 ನವೆಂಬರ್ 2023, 11:36 IST
Last Updated 17 ನವೆಂಬರ್ 2023, 11:36 IST
ಅಕ್ಷರ ಗಾತ್ರ

ಹೈದರಾಬಾದ್: ಆರು ಗ್ಯಾರಂಟಿಗಳು ಹಾಗೂ ಹಲವು ಘೋಷಣೆಗಳು ಇರುವ ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಗೆ ‘ಅಭಯ ಹಸ್ತಂ’ ಎಂಬ ಹೆಸರು ನೀಡಿದೆ. ಏನೇ ಬಂದರೂ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂಬ ಭಾವನೆ ಮತದಾರರಲ್ಲಿ ಇದೆ ಎಂದು ಖರ್ಗೆ ಹೇಳಿದರು.

‘ಗ್ಯಾರಂಟಿಗಳನ್ನು ನಾವು ಕರ್ನಾಟಕದಲ್ಲಿ ನೀಡಿದ್ದೇವೆ, ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವ ಕಾರಣ ಕರ್ನಾಟಕದ ಮಹಿಳೆಯರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ತೆಲಂಗಾಣದಲ್ಲಿ ಆರೂ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ’ ಎಂದು ಖರ್ಗೆ ಹೇಳಿದರು.

‘ಪ್ರಣಾಳಿಕೆಯು ನಮ್ಮ ಪಾಲಿಗೆ ಭಗವದ್ಗೀತೆ, ಕುರಾನ್, ಬೈಬಲ್ ಇದ್ದಂತೆ. ಆರೂ ಗ್ಯಾರಂಟಿಗಳಿಗೆ ಮೊದಲ ಸಂಪುಟ ಸಭೆಯಲ್ಲಿಯೇ ಅನುಮೋದನೆ ನೀಡಲಾಗುತ್ತದೆ’ ಎಂದರು.

‘ಮೋದಿ ಮತ್ತು ಕೆಸಿಆರ್‌ ಒಟ್ಟಾಗಿ ಏನೇ ಪ್ರಯತ್ನ ನಡೆಸಿದರೂ ನಾವು ಅಧಿಕಾರಕ್ಕೆ ಬರುವುದು ಖಚಿತ’ ಎಂದು ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರಿಗೆ ಸವಾಲೆಸೆದರು.

ಮುಖ್ಯಮಂತ್ರಿ ರಾವ್ ಅವರು ತಾವು ನಿವೃತ್ತರಾಗಲು ಸಿದ್ಧರಿರುವುದಾಗಿ ಹೇಳುತ್ತಾರೆ, ಜನ ಕೂಡ ಅವರನ್ನು ಬೀಳ್ಕೊಡಲು ಸಿದ್ಧರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಕಾಲೇಶ್ವರಂ ಏತ ನೀರಾವರಿ ಯೋಜನೆಯ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಪ್ರಣಾಳಿಕೆಯಲ್ಲಿ ಏನಿದೆ?
* ಮಹಿಳೆಯರಿಗೆ ಪ್ರತಿ ತಿಂಗಳು ₹2,500 ನೆರವು, ₹500ಕ್ಕೆ ಎಲ್‌ಪಿಜಿ ಸಿಲಿಂಡರ್ * ಎಲ್ಲ ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ * ರೈತರಿಗೆ ಪ್ರತಿ ವರ್ಷ ₹15 ಸಾವಿರದವರೆಗೆ ನೆರವು, ಕೃಷಿ ಕಾರ್ಮಿಕರಿಗೆ ವರ್ಷಕ್ಕೆ ₹12 ಸಾವಿರ ನೆರವು * ವೃದ್ಧರಿಗೆ ₹4,000 ಸಾಮಾಜಿಕ ಪಿಂಚಣಿ, ಅರ್ಹರಿಗೆ ₹10 ಲಕ್ಷದವರೆಗಿನ ಆರೋಗ್ಯ ವಿಮೆ * ವಿದ್ಯಾರ್ಥಿಗಳಿಗೆ ₹5 ಲಕ್ಷದವರೆಗೆ ನೆರವು, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ವೈಫೈ * ₹2 ಲಕ್ಷದವರೆಗಿನ ಬೆಳೆ ಸಾಲ ಮನ್ನಾ, ಆಟೊ ರಿಕ್ಷಾ ಚಾಲಕರಿಗೆ ವಾರ್ಷಿಕ ₹12 ಸಾವಿರ ನೆರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT