ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರ |ಸೇನಾ ವಾಹನದ ಮೇಲೆ ಉಗ್ರರ ದಾಳಿ; 5 ಯೋಧರು ಹುತಾತ್ಮ

Published 21 ಡಿಸೆಂಬರ್ 2023, 14:07 IST
Last Updated 21 ಡಿಸೆಂಬರ್ 2023, 14:07 IST
ಅಕ್ಷರ ಗಾತ್ರ

ಪೂಂಛ್/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಗುರುವಾರ ಹಠಾತ್ ದಾಳಿ ನಡೆಸಿದ್ದು, ಐವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಯೋಧರಿಗೆ ಗಾಯಗಳಾಗಿವೆ. ಡೇರಾ ಕಿ ಗಲಿ ಮತ್ತು ಬುಫ್ಲಿಯಾಜ್‌ ನಡುವೆ ಧಾತ್ಯರ್ ಮೋರ್‌ನಲ್ಲಿ 3.45ರ ಸುಮಾರಿಗೆ ದಾಳಿ ನಡೆದಿದೆ.

ಭಯೋತ್ಪಾದಕರ ಏಕಾಏಕಿ ದಾಳಿಗೆ ಯೋಧರು ತಕ್ಷಣವೇ ಪ್ರತ್ಯುತ್ತರ ನೀಡಿದರು. ಆಗ ನಡೆದ ಚಕಮಕಿಯಲ್ಲಿ ಐದು ಮಂದಿ ಯೋಧರು ಪ್ರಾಣ ಕಳೆದುಕೊಂಡು, ಇಬ್ಬರು ಗಾಯಗೊಂಡರು ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ದಾಳಿ ನಡೆದ ಪ್ರದೇಶವನ್ನು ಸೇನೆಯ ಯೋಧರು ಸುತ್ತುವರಿದಿದ್ದಾರೆ, ಭಯೋತ್ಪಾದಕರನ್ನು ಮಣಿಸಲು ಹೆಚ್ಚುವರಿಯಾಗಿ ಯೋಧರನ್ನು ಕಳುಹಿಸಲಾಗಿದೆ ಎಂದು ವರದಿಗಳು ಹೇಳಿವೆ.

ಭಯೋತ್ಪಾದಕ ಸಂಘಟನೆಗಳನ್ನು ಸೇರಿರುವ ಸ್ಥಳೀಯರು ಹಾಗೂ ಬಾಡಿಗೆ ಸೈನಿಕರು ಗೆರಿಲ್ಲಾ ಯುದ್ಧತಂತ್ರಗಳ ತರಬೇತಿ ಪಡೆದುಕೊಂಡಿದ್ದಾರೆ. ಇವರು ಸ್ಥಳೀಯ ಭೌಗೋಳಿಕ ಪ್ರದೇಶವ‌ನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿನ ಭೌಗೋಳಿಕ ಸ್ವರೂಪದ ಬಗ್ಗೆ ಬಹಳ ತಿಳಿವಳಿಕೆ ಇರುವ ಶತ್ರುವನ್ನು ಸೇನಾ ಸಿಬ್ಬಂದಿ ಎದುರಿಸ
ಬೇಕಾಗಿದೆ. ಇಲ್ಲಿನ ಪ್ರದೇಶವು ಶತ್ರುವಿಗೆ ಚೆನ್ನಾಗಿ ತಿಳಿದಿದೆ. ದಟ್ಟ ಅಡವಿಯು ಅವರ ಪಾಲಿಗೆ ಕೋಟೆಯಂತೆ ಆಗಿದೆ’ ಎಂದು ಹೇಳಿದರು.

ಬಡಿದಾಡಿರುವ ಸಾಧ್ಯತೆ

ಯೋಧರು ಹಾಗೂ ಭಯೋತ್ಪಾದಕರ ನಡುವೆ ಕೈಕೈ ಮಿಲಾಯಿಸಿ ಬಡಿದಾಟ ನಡೆದಿರುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಯೋತ್ಪಾದಕರು ತಾವು ಗುರಿಯಾಗಿಸಿಕೊಂಡಿದ್ದ ಯೋಧರಿಂದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಡಗುದಾಣ

ಶ್ರೀನಗರ: ರಜೌರಿ–ಪೂಂಛ್ ಪ್ರದೇಶವು 2021ರಿಂದಲೂ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗಿ ಪರಿವರ್ತನೆ ಆಗಿದೆ. ಇಲ್ಲಿ ಸೇನಾ ಯೋಧರ ಮೇಲೆ ದೊಡ್ಡ ಮಟ್ಟದ ದಾಳಿಗಳೂ ನಡೆದಿವೆ. ಕಳೆದ ತಿಂಗಳಲ್ಲಿ ನಡೆದ ಕಾರ್ಯಾಚರಣೆಯೊಂದರಲ್ಲಿ ಐವರು ಯೋಧರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದರು. ಪ್ರಾಣ ಕಳೆದುಕೊಂಡ ಯೋಧರಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಕೂಡ ಸೇರಿದ್ದರು.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ನಡೆದ ಎರಡು ದಾಳಿಗಳಲ್ಲಿ ಒಟ್ಟು ಹತ್ತು ಮಂದಿ ಸೈನಿಕರು ಸಾವನ್ನಪ್ಪಿದ್ದರು. ರಜೌರಿ–ಪೂಂಛ್‌ ಪ್ರದೇಶದಲ್ಲಿ ಕನಿಷ್ಠ 20ರಿಂದ 25 ಮಂದಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಸೇನೆಯ ಉತ್ತರ ವಲಯದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ತಿಳಿಸಿದ್ದರು. 

ಇಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಾಶಪಡಿಸಲು ಸೇನೆಗೆ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT