ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ‘ಫ್ಯಾಕ್ಟ್ ಚೆಕಿಂಗ್ ಘಟಕ’ ಸ್ಥಾಪಿಸುವ ಕರ್ನಾಟಕ ಸರ್ಕಾರದ ನಡೆಗೆ ಭಾರತೀಯ ಸಂಪಾದಕರ ಒಕ್ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ಭಾನುವಾರ ಕಳವಳ ವ್ಯಕ್ತಪಡಿಸಿದೆ.
‘ಕರ್ನಾಟಕ ಸರ್ಕಾರದ ಇಂಥ ಕ್ರಮವು ಭಿನ್ನ ಧ್ವನಿಗಳನ್ನು ಹತ್ತಿಕ್ಕುವುದಕ್ಕೆ ಕಾರಣವಾಗಲಿದೆ’ ಎಂದು ಒಕ್ಕೂಟದ ಅಧ್ಯಕ್ಷೆ ಸೀಮಾ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಅನಂತನಾಥ್ ಹಾಗೂ ಖಜಾಂಚಿ ಶ್ರೀರಾಮ್ ಪವಾರ್ ಹೇಳಿದ್ದಾರೆ.
‘ಈ ಉದ್ದೇಶಿತ ಫ್ಯಾಕ್ಟ್ ಚೆಕಿಂಗ್ ಘಟಕದ ವ್ಯಾಪ್ತಿ ಮತ್ತು ಅಧಿಕಾರಗಳು ಹಾಗೂ ಈ ಘಟಕ ಯಾವ ವಿಧಾನದಡಿ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗಳನ್ನು ಉಲ್ಲೇಖಿಸಿರುವ ಅವರು, ‘ಈ ಘಟಕಕ್ಕೆ ಸಂಬಂಧಿಸಿದ ಚೌಕಟ್ಟು ರಚನೆಗೂ ಮುನ್ನ ಪತ್ರಿಕಾ ಸಂಘಟನೆಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.