ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಸಂಜಯ್‌ಗೆ ಜಾಮೀನು, ಎಎಪಿಗೆ ಹೆಚ್ಚಿದ ನೈತಿಕ ಸ್ಥೈರ್ಯ

Published 3 ಏಪ್ರಿಲ್ 2024, 14:22 IST
Last Updated 3 ಏಪ್ರಿಲ್ 2024, 14:22 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಎಎಪಿ ಪಕ್ಷದ ಪ್ರಮುಖ ನಾಯಕರು ಜೈಲು ಸೇರುತ್ತಿರುವ ಸಂಕಷ್ಟದ ಸಂದರ್ಭದಲ್ಲಿಯೇ, ಅದರ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರಿಗೆ ಜಾಮೀನು ದೊರೆತಿರುವುದು ಎಎಪಿ ನಾಯಕರು, ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸುವಂತೆ ಮಾಡಿದೆ.

ಸಿಂಗ್‌ ಅವರ ಜೈಲುವಾಸ ವಿಸ್ತರಿಸುವುದಕ್ಕೆ ಜಾರಿ ನಿರ್ದೇಶನಾಲಯ ಯಾವುದೇ ಪುರಾವೆ ಒದಗಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು, ಎಎ‍ಪಿ ನಾಯಕರ ಉತ್ಸಾಹವನ್ನೂ ಹೆಚ್ಚಿಸಿದೆ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಒಂದು ದಿನದ ಬಳಿಕ ಸಿಂಗ್‌ ಅವರಿಗೆ ಜಾಮೀನು ಮಂಜೂರಾಗಿದೆ. ಆದಾಗ್ಯೂ, ಈ ಪಕ್ಷದ ಹಿರಿಯ ನಾಯಕರಾದ ಮನೀಶ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌ ಸಹ ಇನ್ನೂ ಜೈಲಿನಲ್ಲಿ ಇದ್ದಾರೆ.

‘ಇ.ಡಿ ವಿರೋಧಿಸದ ಕಾರಣ ಸಂಜಯ್‌ ಅವರಿಗೆ ಜಾಮೀನು ದೊರೆತಿದೆ. ಹೀಗಾಗಿ ಇನ್ನು ಮುಂದೆ ಇ.ಡಿಯು ಮೋದಿ ಸರ್ಕಾರದ ಸೂಚನೆಯಂತೆ ಕೆಲಸ ಮಾಡುತ್ತಿದೆ ಎನ್ನುವಂತಿಲ್ಲ’ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಸುಪ್ರೀಂ ಕೋರ್ಟ್‌ನಿಂದ ಎದುರಾಗಬಹುದಾದ ಪ್ರತಿಕೂಲ ಹೇಳಿಕೆಗಳನ್ನು ತಪ್ಪಿಸಲು ಜಾಮೀನು ಅರ್ಜಿಗೆ ಇ.ಡಿ ವಿರೋಧಿಸಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಜ್ರಿವಾಲ್‌ ಬಂಧನದ ಬಳಿಕ ಪಕ್ಷದ ಕಾರ್ಯ ಚಟುವಟಿಕೆ, ಪ್ರತಿಭಟನೆ, ‘ಇಂಡಿಯಾ’ ಮೈತ್ರಿಕೂಟದ ಜತೆ ಸಂವಹನ ನಡೆಸುವ ಕಾರ್ಯಗಳ ಜವಾಬ್ದಾರಿ ಎರಡನೇ ಸಾಲಿನ ನಾಯಕರ ಮೇಲೆ ಬಿದ್ದಿದೆ. ಇದೀಗ ಸಂಜಯ್‌ ಸಿಂಗ್‌ ಅವರಿಗೆ ಜಾಮೀನು ದೊರೆತಿರುವುದರಿಂದ ಅವರ ಸೇವೆಯೂ ದೊರೆಯಲಿದೆ.

ಸಿಂಗ್‌ ಅವರ ಅನುಭವ, ಹಿರಿತನವು ಲೋಕಸಭೆ ಚುನಾವಣೆಯ ಪ್ರಚಾರದಲ್ಲೂ ಪಕ್ಷಕ್ಕೆ ನೆರವಾಗಲಿದೆ. ಅಲ್ಲದೆ ಎಎಪಿ ಮಿತ್ರ ಪಕ್ಷಗಳ ಜತೆಗೆ ಸಮನ್ವಯ ಮತ್ತು ಸಹಕಾರ ವೃದ್ಧಿಸಲೂ ಸಹಾಯವಾಗುತ್ತದೆ. ಸಿಂಗ್‌ ಅವರು ಈ ಹಿಂದೆ ಕೇಜ್ರಿವಾಲ್‌ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರ ನಡುವೆ ಸೇತುವೆಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ದೆಹಲಿ, ಪಂಜಾಬ್‌ ಸೇರಿದಂತೆ ಇತರೆಡೆ ಪಕ್ಷದ ಕೆಲ ನಾಯಕರಲ್ಲಿನ ಅತೃಪ್ತಿಯನ್ನು ಶಮನಗೊಳಿಸಬೇಕಾದ ಪ್ರಮುಖ ಸವಾಲು ಸಿಂಗ್‌ ಅವರ ಮೇಲಿದೆ.

ಉತ್ತರ ಪ್ರದೇಶದ ಸುಲ್ತಾನ್‌ಪುರದ 52 ವರ್ಷದ ನಾಯಕರಾದ ಸಿಂಗ್‌, ಗಣಿಗಾರಿಕೆ ವಿಷಯದಲ್ಲಿ ಡಿಪ್ಲೊಮಾ ಎಂಜಿನಿಯರಿಂಗ್‌ ಪೂರೈಸಿದ್ದಾರೆ. ರಾಜ್ಯಸಭಾ ಸದಸ್ಯರೂ ಆಗಿರುವ ಅವರು ವಾಕ್ಚಾತುರ್ಯಕ್ಕೆ ಹೆಸರುವಾಸಿ. ವಿವಿಧ ಪಕ್ಷಗಳ ನಡುವೆ ಉತ್ತಮ ಸಂಪರ್ಕ ಹೊಂದಿರುವ ನಾಯಕ.

ಜಾಮೀನು ಆದೇಶದಿಂದ ಬಾನ್ಸುರಿ ಹೆಸರು ತೆಗೆಯಲು ನಿರ್ದೇಶನ

ನವದೆಹಲಿ (ಪಿಟಿಐ): ಎಎಪಿ ನಾಯಕ ಸಂಜಯ್‌ ಸಿಂಗ್‌ ಅವರಿಗೆ ಜಾಮೀನು ಮಂಜೂರು ಮಾಡಿದ ಆದೇಶದಲ್ಲಿ ಅಚಾತುರ್ಯದಿಂದ ಪಟ್ಟಿಗೆ ಸೇರಿರುವ ವಕೀಲರಾದ ಬಾನ್ಸುರಿ ಸ್ವರಾಜ್‌ ಅವರ ಹೆಸರನ್ನು ಕೈಬಿಡಲು ಸುಪ್ರೀಂ ಕೋರ್ಟ್‌ ಬುಧವಾರ ಆದೇಶಿಸಿದೆ.

ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ವಕೀಲ ಜೊಹೆಬ್‌ ಹುಸೇನ್‌ ಅವರು ‘ಸ್ವರಾಜ್‌ ಅವರು ಈ ಪ್ರಕರಣದಲ್ಲಿ ಹಾಜರಾಗಿಲ್ಲ ಅಥವಾ ಅವರು ಈ ವಿಷಯದಲ್ಲಿ ಇ.ಡಿಯನ್ನು ಪ್ರತಿನಿಧಿಸಿಲ್ಲ’ ಎಂದು ತಿಳಿಸಿದರು.

ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ಪೀಠವು ‘ಸರಿ ನಾವು ಆದೇಶವನ್ನು ಸರಿಪಡಿಸುತ್ತೇವೆ’ ಎಂದು ಹೇಳಿತು. ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಪುತ್ರಿಯೂ ಆಗಿರುವ ಬಾನ್ಸುರಿ ಸ್ವರಾಜ್‌ ನವದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. 

ಐಎಲ್‌ಬಿಎಸ್‌ ಆಸ್ಪತ್ರೆಯಿಂದ ಸಿಂಗ್‌ ಬಿಡುಗಡೆ

ನವದೆಹಲಿ (ಪಿಟಿಐ): ಎಎಪಿ ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಅವರು ಬುಧವಾರ ಐಎಲ್‌ಬಿಎಸ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿ ಜೈಲಿಗೆ ತೆರಳಿದರು. ಅವರಿಗೆ ಮಂಗಳವಾರವಷ್ಟೇ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಯಕೃತ್‌ ಸಂಬಂಧಿ ಸಮಸ್ಯೆಗಾಗಿ ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದರು. ಈ ವೇಳೆಯೇ ಅವರಿಗೆ ಜಾಮೀನು ದೊರೆತ ಸುದ್ದಿ ತಿಳಿಯಿತು ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಮೀನು ಆದೇಶದ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅವರು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT