ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಜನರಿಗೆ ಭಾರತೀಯರ ಬಗ್ಗೆ ಪ್ರೀತಿಯಿದೆ

ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎನ್ನುವವವರಿಗೆ ಶರದ್ ಪವಾರ್ ಪಾಠ
Last Updated 5 ಆಗಸ್ಟ್ 2018, 19:27 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳುತ್ತಿರುವವರಿಗೆ ಭಾರತದ ಬಗ್ಗೆಯಾಗಲೀ, ಪಾಕಿಸ್ತಾನದ ಬಗ್ಗೆಯಾಗಲೀ ಗೊತ್ತಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕಿಡಿ ಕಾರಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪವಾರ್ ಮಾತನಾಡಿದರು. ‘ಅಲ್ಪಸಂಖ್ಯಾತ ಸಮುದಾಯದ ಯಾವುದೇ ವ್ಯಕ್ತಿ ತಮ್ಮ ಅಭಿಪ್ರಾಯವನ್ನು ಹೇಳುವಂತೆಯೇ ಇಲ್ಲ. ಆ ಅಭಿಪ್ರಾಯ ಕೆಲವರಿಗೆ ಹಿಡಿಸುವುದಿಲ್ಲ. ಹೀಗಾಗಿ ಭಾರತದಲ್ಲಿ ಜೀವಿಸಲು ಆತನಿಗೆ ಹಕ್ಕಿಲ್ಲ ಎಂದು ಆ ಕೆಲವರು ಪ್ರತಿಪಾದಿಸುತ್ತಾರೆ, ಪಾಕಿಸ್ತಾನಕ್ಕೆ ಹೋಗುವಂತೆ ಒತ್ತಾಯಿಸುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಪಾಕಿಸ್ತಾನ ಅಂದರೆ ಏನು? ದೇಶ ವಿಭಜನೆಗೂ ಮುನ್ನ ಅದು ಭಾರತದ್ದೇ ಭಾಗವಾಗಿತ್ತು, ಪಾಕಿಸ್ತಾನದಲ್ಲಿ ನೆಲೆಸಿರುವವರು ಭಾರತೀಯರೇ ಆಗಿದ್ದರು. ದೇಶ ವಿಭಜನೆ ಸಂದರ್ಭದಲ್ಲಿ ಕೋಟ್ಯಂತರ ಮಂದಿ ಈ ಕಡೆಯಿಂದ ಆ ಕಡೆಗೆ ಹೋಗಿದ್ದಾರೆ, ಆ ಕಡೆಯಿಂದ ಈ ಕಡೆಗೆ ಬಂದಿದ್ದಾರೆ. ಎರಡೂ ದೇಶದ ಜನರ ಮಧ್ಯೆ ಸಂಘರ್ಷ ಇಲ್ಲ. ಆದರೆ, ‘ಪಾಕಿಸ್ತಾನಕ್ಕೆ ಹೋಗಿ– ಪಾಕಿಸ್ತಾನಕ್ಕೆ ಹೋಗಿ’ ಎಂದು ಬಡಬಡಿಸುತ್ತಿರುವವರಿಗೆ ಎರಡೂ ದೇಶಗಳ ಬಗ್ಗೆ ಕಿಂಚಿತ್ ಜ್ಞಾನವೂ ಇಲ್ಲ’ ಎಂದು ಅವರು ಹರಿಹಾಯ್ದರು.

‘ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷನಾಗಿದ್ದಾಗ ನಾನು ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದೇನೆ. ಅಲ್ಲಿನ ಜನಸಾಮಾನ್ಯರನ್ನು ಭೇಟಿ ಮಾಡಿದ್ದೇನೆ. ಭಾರತ ಮತ್ತು ಭಾರತೀಯರ ಮಧ್ಯೆ ಆ ಜನಕ್ಕೆ ಬಹಳ ಪ್ರೀತಿಯಿದೆ. ಭಾರತದಲ್ಲಿ ಸಂಬಂಧಿಕರನ್ನು ಹೊಂದಿರುವ ಬಹಳ ಮಂದಿ ಪಾಕಿಸ್ತಾನದಲ್ಲಿದ್ದಾರೆ. ಎರಡೂ ದೇಶಗಳ ಮಧ್ಯೆ ಸಂಘರ್ಷ ಇರುವ ಕಾರಣಕ್ಕೆ ಅವರು ಭಾರತಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಪವಾರ್ ವಿವರಿಸಿದರು.

ಜಾರಿಯಲ್ಲಿರುವ ಮೀಸಲಾತಿ ಬದಲಿಸಬೇಡಿ:‘ಮರಾಠ ಜನರಿಗೆ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ, ಈಗ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣವನ್ನು ಬದಲಿಸಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿ ಪ್ರಮಾಣವನ್ನು ಕಡಿಮೆ ಮಾಡಬಾರದು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT