ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರನ್ನು ಒಡೆದು ಆಳುವವರೇ ದೇಶ ವಿರೋಧಿಗಳು: ಸೋನಿಯಾ ಗಾಂಧಿ

ಅಂಬೇಡ್ಕರ್‌ ಜಯಂತಿ ಪ್ರಯುಕ್ತ ‘ದಿ ಟೆಲಿಗ್ರಾಫ್‌’ನಲ್ಲಿ ಬರೆದ ಲೇಖನದಲ್ಲಿ ಸೋನಿಯಾ ಗಾಂಧಿ ಆರೋಪ
Last Updated 14 ಏಪ್ರಿಲ್ 2023, 14:01 IST
ಅಕ್ಷರ ಗಾತ್ರ

ನವದೆಹಲಿ:‘ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ಒಡೆದು ಆಳುತ್ತಿರುವವರು, ಜನರನ್ನು ಪರಸ್ಪರ ಎತ್ತಿಕಟ್ಟುವಲ್ಲಿ ತೊಡಗಿರುವವರೇ ನಿಜವಾದ ‘ದೇಶ ವಿರೋಧಿ’ಗಳು’ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಹೇಳಿದ್ದಾರೆ.

‘ಧರ್ಮ, ಭಾಷೆ, ಜಾತಿ ಹಾಗೂ ಲಿಂಗದ ಆಧಾರದ ಮೇಲೆ ಜನರ ನಡುವೆ ಒಡಕು ಮೂಡಿಸಲು ಯತ್ನಿಸಲಾಗುತ್ತಿದೆ. ಆದರೆ, ಜನರು ನೀಡಿರುವ ಅಧಿಕಾರವನ್ನು ಆಡಳಿತ ನಡೆಸಲು ಹಾಗೂ ಕರ್ತವ್ಯ ನಿಭಾಯಿಸಲು ಬಳಕೆ ಮಾಡಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಇಂಗ್ಲಿಷ್‌ ನಿಯತಕಾಲಿಕ ‘ದಿ ಟೆಲಿಗ್ರಾಫ್‌’ನಲ್ಲಿ ಲೇಖನ ಬರೆದಿರುವ ಅವರು, ‘ಸಂವಿಧಾನದ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ದಾಳಿಯನ್ನು ತಡೆಯಲು ದೇಶದ ಜನತೆ ಕಾರ್ಯಪ್ರವೃತ್ತರಾಗಬೇಕು’ ಎಂದಿದ್ದಾರೆ.

‘ಕೇಂದ್ರ ಸರ್ಕಾರವು ಸಂವಿಧಾನದಡಿ ಸ್ಥಾಪಿತವಾಗಿರುವ ಸಂಸ್ಥೆಗಳನ್ನು ದುರ್ಬಳಕೆ ಹಾಗೂ ನಾಶ ಮಾಡುವ ಕಾರ್ಯದಲ್ಲಿ ತೊಡಗಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯ ಸೇರಿದಂತೆ ಸಂವಿಧಾನದ ಅಡಿಪಾಯಗಳನ್ನು ದುರ್ಬಲಗೊಳಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ದೇಶ ಈಗ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ರಾಜಕೀಯ ಪಕ್ಷಗಳಾಗಿ, ಯೂನಿಯನ್‌ಗಳು, ಸಂಘ–ಸಂಸ್ಥೆಗಳು, ನಾಗರಿಕ ಸಂಘಟನೆಗಳಾಗಿ ಅಥವಾ ವೈಯಕ್ತಿಕ ಮಟ್ಟದಲ್ಲಾದರೂ ಸರಿ, ಎಲ್ಲರೂ ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ಹಹಿಸಬೇಕು. ಅಂಬೇಡ್ಕರ್‌ ಅವರ ಜೀವನ ಹಾಗೂ ಅವರ ಹೋರಾಟವೇ ನಮಗೆ ಪಾಠ ಹಾಗೂ ದಾರಿ ದೀಪ’ ಎಂದೂ ಅವರು ಲೇಖನದಲ್ಲಿ ಪ್ರತಿಪಾದಿಸಿದ್ದಾರೆ.

‘ಭಿನ್ನಾಭಿಪ್ರಾಯ ಮತ್ತು ಆರೋಗ್ಯಕರ ಚರ್ಚೆಗಳು ಇರಬೇಕು. ಆದರೆ, ಅಂತಿಮವಾಗಿ ದೇಶದ ಹಿತಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂಬುದೆ ನಮಗೆ ಮೊದಲ ಪಾಠವಾಗಬೇಕು. ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು ಗಮನಿಸಿದಾಗ, ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ, ಅಂಬೇಡ್ಕರ್‌, ಸರ್ದಾರ ವಲ್ಲಭಭಾಯಿ ಪಟೇಲ್ ಹಾಗೂ ಇತರ ನಾಯಕರ ನಡುವೆ ಭಾರಿ ಭಿನ್ನಾಭಿಪ್ರಾಯಗಳಿದ್ದವು ಎಂಬುದು ತಿಳಿಯುತ್ತದೆ’ ಎಂದಿದ್ದಾರೆ.

‘ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹಾನ್‌ ವ್ಯಕ್ತಿಗಳು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಏಕೈಕ ಉದ್ದೇಶ ಸಾಧನೆಗಾಗಿ ದುಡಿದರು ಎಂಬುದೂ ತಿಳಿಯುತ್ತದೆ’ ಎಂದಿರುವ ಅವರು, ‘ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್‌ ಅವರ ಕಾರ್ಯನಿರ್ವಹಣೆಯೇ ಇಂಥ ಆದರ್ಶಮಯ ತತ್ವಕ್ಕೆ ನಿದರ್ಶನ’ ಎಂದು ಹೇಳಿದ್ದಾರೆ.

**

‘ಅಂಬೇಡ್ಕರ್ ಮಾತುಗಳ ಅವಹೇಳನ’

‘ಸಂವಿಧಾನ ಕರಡು ರಚನಾ ಸಮಿತಿ ಸಭೆಯಲ್ಲಿ ಕೊನೆಯ ಭಾಷಣ ಮಾಡಿದ ಅಂಬೇಡ್ಕರ್‌, ಜಾತಿ ಪದ್ಧತಿಯು ಸಮಾಜದಲ್ಲಿನ ಭ್ರಾತೃತ್ವದ ಬೇರುಗಳನ್ನೇ ನಾಶ ಮಾಡುತ್ತದೆ. ಇಂಥ ವ್ಯವಸ್ಥೆಯೇ ದೇಶ ವಿರೋಧಿ ಎಂದು ಹೇಳಿದ್ದರು. ಈಗ ಅಧಿಕಾರದಲ್ಲಿ ಇರುವವರು ಅಂಬೇಡ್ಕರ್‌ ಅವರ ಈ ಮಾತುಗಳನ್ನು ಅವಹೇಳನ ಮಾಡುತ್ತಿದ್ದಾರೆ’ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

‘ಜಾತಿ ಪದ್ಧತಿಯು ನಮ್ಮಲ್ಲಿ ಪ್ರತ್ಯೇಕತೆಗೆ ಕಾರಣವಾಗುತ್ತದೆ. ಮತ್ಸರ ಹುಟ್ಟಿಸುತ್ತದೆ. ಕೊನೆಗೆ ಭಾರತೀಯರನ್ನು ಇದು ವಿಭಜನೆ ಮಾಡುತ್ತದೆ ಎಂದು ಅಂಬೇಡ್ಕರ್‌ ವಿವರಿಸಿದ್ದರು’ ಎಂದು ಲೇಖನದಲ್ಲಿ ಹೇಳಿದ್ದಾರೆ.

‘ಭಾರತೀಯರಲ್ಲಿ ಸಹೋದತ್ವ ಬೆಳೆಸಬೇಕು ಎಂಬುದು ಅಂಬೇಡ್ಕರ್‌ ಅವರಿಂದ ನಾವು ಕಲಿಯಬೇಕಾದ ಎರಡನೇ ಪಾಠವಾದರೆ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಹೋರಾಡಬೇಕು ಎಂಬುದು ಮೂರನೇ ಪಾಠ’ ಎಂದು ವಿವರಿಸಿದ್ದಾರೆ.

* ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮೀಸಲಾತಿ ವ್ಯವಸ್ಥೆಗೆ ಅಪಾಯ ಒಡ್ಡುತ್ತಿದೆ. ಪರಿಶಿಷ್ಟರು, ಆದಿವಾಸಿಗಳು, ಇತರೆ ಹಿಂದುಳಿದ ವರ್ಗಗಳ ಜನರು ಬಾಧಿತರಾಗುತ್ತಿದ್ದಾರೆ

* ಅಂಬೇಡ್ಕರ್‌ ಜೀವನ–ಹೋರಾಟ ಎಲ್ಲ ಭಾರತೀಯರಿಗೆ ಸದಾ ಸ್ಫೂರ್ತಿ

* ಸಹೋದರತ್ವ ಎಂಬುದು ಪ್ರತಿ ಭಾರತೀಯನ ರಕ್ತದಲ್ಲಿಯೇ ಇದೆ. ಇದು ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಸಾಬೀತಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT