ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್–ಎಎಪಿ ಮೈತ್ರಿಗೆ ಧಕ್ಕೆ? ದೆಹಲಿ, ಹರಿಯಾಣದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ

Published 15 ಜೂನ್ 2024, 19:32 IST
Last Updated 15 ಜೂನ್ 2024, 19:32 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ದ ಕಾಂಗ್ರೆಸ್‌ ಮತ್ತು ಎಎಪಿ ಪಕ್ಷಗಳು ದೆಹಲಿ ಹಾಗೂ ಹರಿಯಾಣದಲ್ಲಿ ತಮ್ಮದೇ ಹಾದಿಯನ್ನು ರೂಪಿಸಿಕೊಳ್ಳುವ ಮತ್ತು ಪರಸ್ಪರ ವಿರೋಧಿಸುವ ಮೂಲಕ ಮೈತ್ರಿಯಿಂದ ನಿಧಾನವಾಗಿ ಕಳಚಿಕೊಳ್ಳುವ
ಪ್ರಕ್ರಿಯೆ ಆರಂಭಿಸಿವೆ.

ರಾಷ್ಟ್ರದ ರಾಜಧಾನಿಯಲ್ಲಿ ತಲೆದೋರಿರುವ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ದೆಹಲಿ ಕಾಂಗ್ರೆಸ್‌ ಘಟಕವು ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಮತ್ತೊಂದೆಡೆ ಹರಿಯಾಣದ‌ಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿರುವ ಎಎಪಿ, ರ್‍ಯಾಲಿ ಆಯೋಜಿಸಲು ನಿರ್ಧರಿಸಿದೆ. ಸಭೆಯಲ್ಲಿ ಕೇಜ್ರಿವಾಲ್‌ ಪತ್ನಿ, ಸುನೀತಾ ಕೇಜ್ರಿವಾಲ್‌ ಪಾಲ್ಗೊಂಡಿದ್ದಾರೆ.

ತಮ್ಮ ನಡುವಣ ಮೈತ್ರಿ ರಾಷ್ಟ್ರಮಟ್ಟ ದಲ್ಲಿ ಮತ್ತು ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿತ್ತು ಎಂದು ಎರಡೂ ಪಕ್ಷದವರು ಹೇಳಿಕೊಳ್ಳುತ್ತಿದ್ದಾರೆ. ಈ ಮೂಲಕ, ವರ್ಷಾಂತ್ಯದ ವೇಳೆಗೆ ಹರಿಯಾಣದಲ್ಲಿ ಮತ್ತು ಮುಂದಿನ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ
ಚುನಾವಣೆಯಲ್ಲಿ ಪರಸ್ಪರರ ವಿರುದ್ಧ ಹೋರಾಡಲು ವೇದಿಕೆ ಅಣಿಗೊಳಿಸುತ್ತಿದ್ದಾರೆ.

ಎಎಪಿ ಮತ್ತು ಕಾಂಗ್ರೆಸ್‌ ದೆಹಲಿ, ಹರಿಯಾಣ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದ್ದವು. ಆದರೆ, ಅಸ್ಸಾಂ ಮತ್ತು ಪಂಜಾಬ್‌ನಲ್ಲಿ ಸೀಟು ಹಂಚಿಕೆ ಮಾಡದೆ, ಪರಸ್ಪರ ಪೈಪೋಟಿ ನಡೆಸಿದ್ದವು. ಎಎಪಿಯು ಅಸ್ಸಾಂನಲ್ಲಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದರೂ, ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿತ್ತು. ಗೋವಾದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸಿತ್ತು.

ವಿಧಾನಸಭಾ ಚುನಾವಣೆಯಲ್ಲಿ ದೆಹಲಿ ಮತ್ತು ಹರಿಯಾಣದಲ್ಲಿ ಪೈಪೋಟಿ ನಡೆಸುವ ಸಾಧ್ಯತೆಯಿದೆ ಎಂದು ಉಭಯ ಪಕ್ಷಗಳು ಈಗಾಗಲೇ ಘೋಷಿಸಿವೆ.

ದೆಹಲಿಯ 280 ಬ್ಲಾಕ್‌ಗಳಲ್ಲಿ ಕಾಂಗ್ರೆಸ್‌ ವತಿಯಿಂದ ಶನಿವಾರ ಮಣ್ಣಿನ ಮಡಕೆ ಒಡೆಯುವ ಪ್ರತಿಭಟನೆ ನಡೆದಿದೆ. ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ದೇವೇಂದ್ರ ಯಾದವ್‌ ಅವರೂ ಪಾಲ್ಗೊಂಡಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 2015ರ ಬಳಿಕ ಒಂದೂ ಸ್ಥಾನ ಗೆದ್ದಿಲ್ಲ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತ ಪ್ರಮಾಣ, ಎಎಪಿಗಿಂತ ಹೆಚ್ಚಿತ್ತು. ಈ ಬಾರಿ ಎಎಪಿಯು ನಾಲ್ಕು ಹಾಗೂ ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.

ದೆಹಲಿಯ ಸುಮಾರು 12 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಉತ್ತಮ ಪ್ರದರ್ಶನ ನೀಡಿದೆ ಎಂಬುದು ಲೋಕಸಭಾ ಫಲಿತಾಂಶದ ವಿಶ್ಲೇಷಣೆಯಿಂದ ತಿಳಿದುಬಂದಿದ್ದು, ಆ ಕ್ಷೇತ್ರ ಗಳತ್ತ ಗಮನ ಹರಿಸಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಪಸಂಖ್ಯಾತ ಮತ್ತು ದಲಿತ ಮತದಾರರ ವಿಶ್ವಾಸ ಗಳಿಸಲು ಪಕ್ಷಕ್ಕೆ ಸಾಧ್ಯವಾಗಿದ್ದು, ಅದು ಮತಗಳಾಗಿ ಪರಿವರ್ತನೆಯಾಗ ಬಹುದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ.

‘ಹರಿಯಾಣದಲ್ಲಿ ಸಿದ್ಧತೆ ಆರಂಭ’

ಹರಿಯಾಣದಲ್ಲಿ ಪಕ್ಷವು ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ ಎಂದು ಎಎಪಿ ನಾಯಕ ಸುಶೀಲ್‌ ಗುಪ್ತಾ ಹೇಳಿದ್ದಾರೆ.

‘ಎಎಪಿಯ ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ನಾಯಕ ಪಕ್ಷವನ್ನು ಬಲಪಡಿಸಲು ಬೇಕಾದ ಸಿದ್ಧತೆಯನ್ನು ಆರಂಭಿಸಲಿದ್ದಾರೆ. ಜೂನ್ 30ರಂದು ಸುನೀತಾ ಕೇಜ್ರಿವಾಲ್ ಅವರ ರ್‍ಯಾಲಿಗೂ ಸಿದ್ಧತೆ ನಡೆಯುತ್ತಿದೆ. ರ‍್ಯಾಲಿ ನಡೆಯುವ ಸ್ಥಳವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT