ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಮಿನಲ್ ಅಪರಾಧ: ಪರಿಷ್ಕೃತ ಮಸೂದೆಗಳ ಮಂಡನೆ

Published 12 ಡಿಸೆಂಬರ್ 2023, 15:27 IST
Last Updated 12 ಡಿಸೆಂಬರ್ 2023, 15:27 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಈಗ ಜಾರಿಯಲ್ಲಿ ಇರುವ ಮೂರು ಕಾನೂನುಗಳಿಗೆ ಬದಲಾಗಿ ಜಾರಿಗೆ ತರಲು ಉದ್ದೇಶಿಸಿರುವ ಕಾನೂನುಗಳಿಗೆ ಸಂಬಂಧಿಸಿದ ಮೂರು ಪರಿಷ್ಕೃತ ಮಸೂದೆಗಳನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಗಳವಾರ ಮಂಡಿಸಿದೆ. ಸಂಸತ್ತಿನ ಸ್ಥಾಯಿ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಪರಿಷ್ಕೃತ ಮಸೂದೆಗಳು ಒಳಗೊಂಡಿವೆ ಎಂದು ಸರ್ಕಾರ ಹೇಳಿದೆ.

ಭಾರತೀಯ ನ್ಯಾಯ ಸಂಹಿತಾ ಮಸೂದೆಯನ್ನು ಲೋಕಸಭೆಯಲ್ಲಿ ಆಗಸ್ಟ್‌ 11ರಂದು ಮಂಡಿಸಲಾಗಿತ್ತು. ಇದರ ಜೊತೆಯಲ್ಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಮಸೂದೆಯನ್ನು ಮಂಡಿಸಲಾಗಿತ್ತು. ಈ ಮೂರು ಮಸೂದೆಗಳನ್ನು ಈಗ ಜಾರಿಯಲ್ಲಿ ಇರುವ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಾಯ್ದೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ತರಲು ಕೇಂದ್ರ ಉದ್ದೇಶಿಸಿದೆ.

ಪುನಃ ಮಂಡಿಸಲಾಗಿರುವ ಮಸೂದೆಗಳಲ್ಲಿ ಕನಿಷ್ಠ ಐದು ಬದಲಾವಣೆಗಳನ್ನು ತರಲಾಗಿದೆ. ಭಯೋತ್ಪಾದನೆಗೆ ಸಂಬಂಧಿಸಿದ ವ್ಯಾಖ್ಯಾನ ಕೂಡ ಬದಲಾವಣೆಯಲ್ಲಿ ಸೇರಿದೆ. ಭಾರತೀಯ ನ್ಯಾಯ (ಎರಡನೆಯ) ಸಂಹಿತೆ ಮಸೂದೆಯಲ್ಲಿ ಭಯೋತ್ಪಾದನೆಯ ವ್ಯಾಖ್ಯಾನವು ಈಗ ‘ಆರ್ಥಿಕ ಭದ್ರತೆ’ ಎಂಬ ಪದಗಳನ್ನು ಕೂಡ ಒಳಗೊಂಡಿದೆ.

‘ದೇಶದ ಆರ್ಥಿಕ ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಎಸಗುವ ಕೃತ್ಯಗಳು’ ಕೂಡ ಭಯೋತ್ಪಾದಕ ಕೃತ್ಯ ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತವೆ ಎಂದು ಪರಿಷ್ಕೃತ ಮಸೂದೆಯು ಹೇಳುತ್ತದೆ. ಅತ್ಯಾಚಾರ ಸಂತ್ರಸ್ತರ ಅಥವಾ ಅಂತಹ ಬಗೆಯ ಅಪರಾಧಗಳ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ರೀತಿಯಲ್ಲಿ ಕೋರ್ಟ್‌ ಕಲಾಪಗಳನ್ನು ಕೋರ್ಟ್‌ನ ಅನುಮತಿ ಇಲ್ಲದೆ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗಿದೆ. ಈ ಅಪರಾಧಕ್ಕಾಗಿ ಗರಿಷ್ಠ ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ ಅಥವಾ ಯಾವುದೇ ಹೈಕೋರ್ಟ್‌ನ ತೀರ್ಪು, ಆದೇಶಗಳನ್ನು ಪ್ರಕಟಿಸುವುದು ಈ ಸೆಕ್ಷನ್‌ನ ವ್ಯಾಪ್ತಿಗೆ ಬರುವುದಿಲ್ಲ.

ತಜ್ಞರು ಹಾಗೂ ಇತರ ಹಲವು ಭಾಗಿದಾರರ ಜೊತೆ ಸಮಾಲೋಚನೆ ನಡೆಸಿದ ಗೃಹ ವ್ಯವಹಾರಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಯು ಕೆಲವು ಬದಲಾವಣೆಗಳನ್ನು ತರಲು ಶಿಫಾರಸು ಮಾಡಿತ್ತು. ಇದರ ನಂತರದಲ್ಲಿ ಪರಿಷ್ಕೃತ ಮಸೂದೆಗಳನ್ನು ಮಂಡಿಸಲಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಥಾಯಿ ಸಮಿತಿಯು ಕೇಂದ್ರ ಗೃಹ ಸಚಿವಾಲಯ, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕಾರಿಗಳ ಜೊತೆ, ತಜ್ಞರ ಜೊತೆ ಹಲವು ಸುತ್ತುಗಳ ಮಾತುಕತೆ ನಡೆಸಿ ಶಿಫಾರಸುಗಳನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT