ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ವ್ಯಕ್ತಪಡಿಸಿದ ಕಲಾವಿದರಿಗೆ ಬಿಜೆಪಿ ಬೆಂಬಲ

‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಟಿ.ಎಂ. ಕೃಷ್ಣ ಆಯ್ಕೆ ವಿವಾದ
Published 22 ಮಾರ್ಚ್ 2024, 15:38 IST
Last Updated 22 ಮಾರ್ಚ್ 2024, 15:38 IST
ಅಕ್ಷರ ಗಾತ್ರ

ಚೆನ್ನೈ: ಮದ್ರಾಸ್‌ ಸಂಗೀತ ಅಕಾಡೆಮಿಯು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿರುವುದಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದ ಅನೇಕ ಗಾಯಕರು, ಸಂಗೀತಕಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿವಾದಕ್ಕೆ ಈಗ ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು ಪ್ರವೇಶ ಮಾಡಿದ್ದಾರೆ.

ತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಈ ಕುರಿತು ಶುಕ್ರವಾರ ಹೇಳಿಕೆ ನೀಡಿದ್ದು, ‘ಗಾಯಕಿ ಸಹೋದರಿಯರಾದ ರಂಜನಿ–ಗಾಯತ್ರಿ ಸೇರಿದಂತೆ ಕೃಷ್ಣ ಅವರ ಆಯ್ಕೆಯನ್ನು ವಿರೋಧಿಸುತ್ತಿರುವ ಇತರ ಎಲ್ಲ ಕಲಾವಿದರ ಜೊತೆಗೆ ಬಿಜೆಪಿ ಪಕ್ಷವು ನಿಲ್ಲುತ್ತದೆ’ ಎಂದು ಹೇಳಿದ್ದಾರೆ.

‘ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಗೂ ದೈವೀಕ ಪ್ರಜ್ಞೆಯ ದೇಗುಲವಾಗಿರುವ ಸಂಗೀತ ಅಕಾಡೆಮಿಯು ಕಳೆದ 9 ದಶಕಗಳಿಂದ ಕೆಲಸ ಮಾಡುತ್ತಿದೆ. ಆದರೆ, ಈ ಸಂಸ್ಥೆಯ ಪಾವಿತ್ರ್ಯವನ್ನು ಹಾಳುಗೆಡವಲು ವಿಭಜಕ ಶಕ್ತಿಗಳು ಬೆದರಿಕೆ ಒಡ್ಡಿವೆ. ಅಕಾಡೆಮಿಯ ಇಂದಿನ ಆಡಳಿತ ವ್ಯವಸ್ಥೆಯ ‘ಹಾನಿಕಾರಕ’ ನಿರ್ಧಾರವನ್ನು ಕಲಾವಿದರು ಒಗ್ಗಟ್ಟಿನಿಂದ ವಿರೋಧಿಸಿದ್ದಾರೆ. ಜೊತೆಗೆ, ಸಂಸ್ಥೆಯ ಪಾವಿತ್ರ್ಯವನ್ನು ಕಾಪಾಡಲು ಹೋರಾಡುತ್ತಿದ್ದಾರೆ. ಇವರ ಬೆನ್ನಿಗೆ ಬಿಜೆಪಿಯು ಎಂದಿಗೂ ನಿಲ್ಲಲಿದೆ’ ಎಂದರು.

ದ್ವೇಷ–ವಿಭಜಕ ಸಿದ್ಧಾಂತಗಳಿಗೆ ಮತ್ತು ಸತ್ತ/ಚಾಲ್ತಿಯಲ್ಲಿಲ್ಲದ ಕಾರ್ಯಸೂಚಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ದೇಗುಲವು ಆಶ್ರಯತಾಣವಾಗಬಾರದು

-ಕೆ. ಅಣ್ಣಾಮಲೈ ಅಧ್ಯಕ್ಷ ತಮಿಳುನಾಡು ಬಿಜೆಪಿ ಘಟಕ

ಕೃಷ್ಣ ಬೆಂಬಲಕ್ಕೆ ಕನಿಮೊಳಿ

ಟಿ.ಎಂ. ಕೃಷ್ಣ ಅವರ ಬೆಂಬಲಕ್ಕೆ ಆಡಳಿತಾರೂಢ ಡಿಎಂಕೆ ಪಕ್ಷವು ನಿಂತಿದೆ. ‘ತಮ್ಮ ಸಾಮಾಜಿಕ ನಂಬಿಕೆಗಳ ಕಾರಣಕ್ಕೆ ಪೆರಿಯಾರ್‌ ಅವರನ್ನು ಗೌರವಿಸುತ್ತಾರೆ ಎನ್ನುವ ಕಾರಣಕ್ಕೆ ಸಂಗೀತಗಾರನೊಬ್ಬನ ವಿರುದ್ಧ ಇಷ್ಟೆಲ್ಲಾ ದ್ವೇಷ ವ್ಯಕ್ತವಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ’ ಎಂದು ಡಿಎಂಕೆ ಸಂಸದೆ ಕನಿಮೊಳಿ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಪೆರಿಯಾರ್‌ ಅವರ ಸಿದ್ಧಾಂತಗಳ ಕುರಿತ ಮೊದಲ ಓದಿನಲ್ಲಿಯೇ ಅವರು ಎಂಥಾ ಮಹಿಳಾಪರ ಎನ್ನುವುದು ತಿಳಿಯುತ್ತದೆ. ಅವರು ಎಂದಿಗೂ ಯಾವ ಮಾರಣಹೋಮಕ್ಕೂ ಕರೆ ನೀಡಿರಲಿಲ್ಲ. ಬಹುಶಃ ಇವರ್‍ಯಾರಿಗೂ ವೈಚಾರಿಕ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ನಂಬಿಕೆ ಇಲ್ಲ ಎನ್ನಿಸುತ್ತದೆ’ ಎಂದೂ ಹೇಳಿದ್ದಾರೆ. ಗಾಯಕಿಯರಾದ ರಂಜನಿ ಹಾಗೂ ಗಾಯತ್ರಿ ಸಹೋದರಿಯರು ಕೃಷ್ಣ ಅವರು ಪೆರಿಯಾರ್‌ ಅವರನ್ನು ವೈಭವೀಕರಿಸುತ್ತಾರೆ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT