ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ್‌ಖಾಲಿ ಪ್ರಕರಣವು ಬಿಜೆಪಿ ನಾಯಕರೇ ರೂಪಿಸಿದ್ದ ಪಿತೂರಿ: ಟಿಎಂಸಿ ಆರೋಪ

Published 5 ಮೇ 2024, 15:42 IST
Last Updated 5 ಮೇ 2024, 15:42 IST
ಅಕ್ಷರ ಗಾತ್ರ

ನವದೆಹಲಿ: ‘ಸಂದೇಶ್‌ಖಾಲಿ ಪ್ರಕರಣವು ಬಿಜೆಪಿ ನಾಯಕರೇ ರೂಪಿಸಿದ್ದ ಪಿತೂರಿ. ಪಕ್ಷದ ನಾಯಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುವಂತೆ ಅಲ್ಲಿನ ಮಹಿಳೆಯರಿಗೆ ಹೇಳಿಕೊಡಲಾಗಿತ್ತು’ ಎಂದು ಬಿಜೆಪಿ ವಿರುದ್ಧ ಟಿಎಂಸಿ ಮುಖಂಡರು ಭಾನುವಾರ ಆರೋಪಿಸಿದ್ದಾರೆ.

ಟಿಎಂಸಿ ಮುಖಂಡರಾದ ಶಶಿ ಪಂಜಾ, ಸಾಗರಿಕಾ ಘೋಷ್‌ ಹಾಗೂ ಸಾಕೇತ್‌ ಗೋಖಲೆ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ‘ಬಿಜೆಪಿ ಪಶ್ಚಿಮ ಬಂಗಾಳ ವಿರೋಧಿಯಾಗಿದೆ’ ಎಂದು ಟೀಕಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎನ್ನಲಾದ ಗಂಗಾಧರ ಕಯಾಲ್‌ ಎಂಬ ವ್ಯಕ್ತಿ, ಸಂದೇಶ್‌ಖಾಲಿ ಘಟನೆಗಳ ಹಿಂದೆ ಸುವೇಂದು ಅಧಿಕಾರಿ ಕೈವಾಡ ಇದೆ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊವನ್ನು ಪ್ರದರ್ಶಿಸಿದರು.

‘ಸಂದೇಶ್‌ಖಾಲಿ ವಿಚಾರದಲ್ಲಿ ಬಿಜೆಪಿ ದೊಡ್ಡ ಪಿತೂರಿ ರೂಪಿಸಿದೆ. ಸಂದೇಶ್‌ಖಾಲಿಯಲ್ಲಿ ಯಾವುದೇ ಅತ್ಯಾಚಾರ ನಡೆದಿಲ್ಲ ಎಂಬುದು ಈ ವಿಡಿಯೊದಿಂದ ಗೊತ್ತಾಗುತ್ತದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಅನುಕೂಲವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಬಿಜೆಪಿ ನಾಯಕರು ಬಯಸಿದ್ದರು’ ಎಂದು ಸಾಗರಿಕಾ ಘೋಷ್‌ ಹೇಳಿದರು.

‘ಪ್ರಧಾನಿ ಮೋದಿ ಅವರು ಪದೇಪದೇ ಸಂದೇಶ್‌ಖಾಲಿ ಕುರಿತು ಮಾತನಾಡುತ್ತಿದ್ದಾರೆ. ಆದರೆ, ಪ್ರಜ್ವಲ್‌ ರೇವಣ್ಣ ವಿಚಾರದಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬ್ರಿಜ್‌ಭೂಷಣ್‌ ಸಿಂಗ್‌ ಪುತ್ರನಿಗೆ ಟಿಕೆಟ್‌ ನೀಡಿದ್ದಾರೆ. ಒಟ್ಟಿನಲ್ಲಿ ಪಶ್ಷಿಮ ಬಂಗಾಳ ಹೆಸರು ಕೆಡಿಸುವುದು ಅವರ ಉದ್ದೇಶವಾಗಿದೆ’ ಎಂದೂ ಘೋಷ್ ಟೀಕಿಸಿದರು.

ಸಿಬಿಐಗೆ ಕಲಾಲ್ ದೂರು

ನವದೆಹಲಿ: ಸಂದೇಶ್‌ಖಾಲಿ ಕುರಿತು ತಾನು ಮಾತನಾಡಿರುವುದು ಎನ್ನಲಾದ ವಿಡಿಯೊ ಕುರಿತು ಬಿಜೆಪಿ ಮಂಡಲ ಅಧ್ಯಕ್ಷ ಗಂಗಾಧರ ಕಯಾಲ್‌ ಅವರು ಸಿಬಿಐಗೆ ದೂರು ನೀಡಿದ್ದಾರೆ.

‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ದೃಢಪಡಿಸದ ಯೂಟ್ಯೂಬ್‌ ಚಾನೆಲ್‌ವೊಂದರಿಂದ ಅಪ್‌ಲೋಡ್‌ ಮಾಡಲಾಗಿದೆ. ವಿಲಿಯನ್ಸ್‌ ಎಂಬ ವ್ಯಕ್ತಿ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ’ ಎಂದು ಸಿಬಿಐಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.

‘ಜನರನ್ನು ದಾರಿತಪ್ಪಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ (ಎಐ) ಬಳಸಿ ನನ್ನ  ಮುಖ ಹಾಗೂ ಧ್ವನಿ ಹೋಲುವಂತೆ ಮಾಡಲಾಗಿದೆ’ ಎಂದು ಕಯಾಲ್‌ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT