ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ ಎಟಿಎಂ ದರೋಡೆ: ಆರೋಪಿಗಳಿಂದ ₹67 ಲಕ್ಷ ವಶ

Published : 28 ಸೆಪ್ಟೆಂಬರ್ 2024, 16:07 IST
Last Updated : 28 ಸೆಪ್ಟೆಂಬರ್ 2024, 16:07 IST
ಫಾಲೋ ಮಾಡಿ
Comments

ನಮಕ್ಕಲ್ (ತಮಿಳುನಾಡು): ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದ ಎಟಿಎಂ ದರೋಡೆ ಪ್ರಕರಣದ ಆರು ಮಂದಿ ಆರೋಪಿಗಳ ವಿರುದ್ಧ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ವೆಪ್ಪಡೈ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಿಂದ ₹67 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ ಕೊಲೆ ಯತ್ನ, ಕ್ರಿಮಿನಲ್ ಪಿತೂರಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೇರಳದ ಎಟಿಎಂಗಳ ದರೋಡೆಯಲ್ಲಿ ಆರೂ ಮಂದಿಯ ಪಾತ್ರ ಇದೆ. ಅವರು ದರೋಡೆ ನಡೆಸಲು ತ್ರಿಶೂರ್‌ಗೆ ತೆರಳುವ ಮೊದಲು ಚೆನ್ನೈನಲ್ಲಿ ಒಂದುಗೂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಬಿಐಗೆ ಸೇರಿದ ಮೂರು ಎಟಿಎಂಗಳಿಂದ ಈ ತಂಡವು ಅಂದಾಜು ₹70 ಲಕ್ಷ ದೋಚಿದೆ. ತಂಡದ ಆರು ಮಂದಿಯನ್ನು ಪೊಲೀಸರು ಬೆಂಬತ್ತಿ ಕುಮಾರಪಾಳಯಂನಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ತಂಡದ ಒಬ್ಬ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

‘ಆರೋಪಿಗಳೆಲ್ಲ ಹರಿಯಾಣದಿಂದ ಮೂರು ತಂಡಗಳಲ್ಲಿ ಚೆನ್ನೈಗೆ ಬಂದಿದ್ದರು. ಇಬ್ಬರು ವಿಮಾನದಲ್ಲಿ, ಮೂವರು ಕಾರಿನಲ್ಲಿ ಹಾಗೂ ಇನ್ನಿಬ್ಬರು ಟ್ರಕ್‌ನಲ್ಲಿ ಬಂದಿದ್ದರು. ಚೆನ್ನೈನಲ್ಲಿ ಒಟ್ಟಾದ ಇವರೆಲ್ಲ ರಸ್ತೆ ಮಾರ್ಗವಾಗಿ ತ್ರಿಶೂರ್‌ಗೆ ತೆರಳಿದ್ದರು’ ಎಂದು ನಮಕ್ಕಲ್ ಜಿಲ್ಲೆಯ ಎಸ್‌ಪಿ ಎಸ್. ರಾಜೇಶ್ ಕಣ್ಣನ್ ತಿಳಿಸಿದ್ದಾರೆ.

ಆರೋಪಿಗಳಿಂದ ನಗದು ಮಾತ್ರವೇ ಅಲ್ಲದೆ, ಅವರ ವಾಹನ ಹಾಗೂ ಒಂದು ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ತಂಡದ ಸದಸ್ಯರು ಗೂಗಲ್ ಮ್ಯಾಪ್ ಬಳಸಿ ಎಟಿಎಂ ಇರುವುದನ್ನು ಗೊತ್ತುಮಾಡಿಕೊಳ್ಳುತ್ತಿದ್ದರು. ನಂತರ ಅವರು ಹೆದ್ದಾರಿಗಳಲ್ಲಿ ಇರುವ ಎಟಿಎಂಗಳ ಪೈಕಿ ಯಾವುದನ್ನು ದರೋಡೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಬ್ಬರು ಮಹಾರಾಷ್ಟ್ರದಲ್ಲಿ ಜೈಲು ಶಿಕ್ಷೆ ಅನುಭವಿಸಿದವರು.

‘ಹಲವು ರಾಜ್ಯಗಳ ಎಟಿಎಂ ಕೇಂದ್ರಗಳಲ್ಲಿ ನಡೆದ ದರೋಡೆ ಪ್ರಕರಣಗಳಲ್ಲಿ ಈ ತಂಡದ ಪಾತ್ರ ಇರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಬಂಧನದ ಬಗ್ಗೆ ಹರಿಯಾಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT