ಅಚ್ಯುತಪುರ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಔಷಧ ತಯಾರಿಕಾ ಕಂಪನಿಯ ಘಟಕವೊಂದರಲ್ಲಿ ಬುಧವಾರ ರಿಯಾಕ್ಟರ್ ಸ್ಫೋಟ ಸಂಭವಿಸಿದ ಪರಿಣಾಮ 17 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಏಳು ಜನರ ಸ್ಥಿತಿ ಚಿಂತಾಜನಕವಾಗಿದೆ.
ರಿಯಾಕ್ಟರ್ ಸ್ಫೋಟದಿಂದ ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿತು. ಕನಿಷ್ಠ 12 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾದವು.
ಎನ್‌ಡಿಆರ್‌ಎಫ್‌ನ ಮೂರೂ ತಂಡಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾದವು.
ಸ್ಫೋಟದಿಂದ ಕಾರ್ಖಾನೆಯ ಕಟ್ಟಡದ ಬಹುತೇಕ ಭಾಗ ಹಾನಿಯಾಗಿದೆ. ಅವಘಡದಿಂದ ಗ್ರಾಮದ ಸುತ್ತಮುತ್ತ ದಟ್ಟ ಹೊಗೆ ಆವರಿಸಿ, ಗ್ರಾಮಸ್ಥರಲ್ಲಿ ಆತಂಕ ಮಡುಗಟ್ಟಿತ್ತು.
ಮಧ್ಯಾಹ್ನ ಊಟದ ಸಮಯದಲ್ಲಿ ಕಾರ್ಖಾನೆಯಲ್ಲಿ ಅವಘಡ ಸಂಭವಿಸಿದೆ. ಕಾರ್ಖಾನೆಯಲ್ಲಿ 381 ಜನರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅನಕಪಲ್ಲಿ ಜಿಲ್ಲಾಧಿಕಾರಿ ವಿಜಯಾ ಕೃಷ್ಣನ್ ತಿಳಿಸಿದ್ದಾರೆ.