ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್ : ಬೊಲ್ಸೊನಾರೊ ವಿರುದ್ಧ ತನಿಖೆಗೆ ಕೋರ್ಟ್ ಅಸ್ತು

ಜ.8 ರಂದು ರಾಷ್ಟ್ರ ರಾಜಧಾನಿಯಲ್ಲಿ ಗಲಭೆ ಪ್ರಕರಣ
Last Updated 14 ಜನವರಿ 2023, 16:16 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ (ಎಪಿ):‌ ಜ.8 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದವರು ಯಾರು? ಇದರಲ್ಲಿ ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಪಾತ್ರವೇನು ಎಂಬುದೂ ಸೇರಿದಂತೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲು ಅಲ್ಲಿನ ಸುಪ್ರೀಂ ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ಪ್ರಾಸಿಕ್ಯೂಟರ್- ಜನರಲ್ ಕಚೇರಿ ಮನವಿಯನ್ನು ನ್ಯಾಯಮೂರ್ತಿ ಅಲೆಕ್ಸಾಂಡರ್‌ ಡಿ ಮೊರಾಸ್‌ ಪುರಸ್ಕರಿಸಿದ್ದಾರೆ.

ಗಲಭೆ ನಡೆದ ಎರಡು ದಿನಗಳ ಬಳಿಕ ಬೊಲ್ಸೊನಾರೊ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ವಿಡಿಯೊವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಡಿಯೊದಲ್ಲಿ, ಅಧ್ಯಕ್ಷ ಲುಯಿಸ್‌ ಇನಾಸಿಯೊ ಲುಲ ಡ ಸಿಲ್ವ ಅವರನ್ನು ಸುಪ್ರೀಂ ಕೋರ್ಟ್ ಮತ್ತು ಬ್ರೆಜಿಲ್‌ ಚುನಾವಣಾ ಪ್ರಾಧಿಕಾರ ಆಯ್ಕೆ ಮಾಡಿದೆ ಎಂದು ದೂರಿದ್ದಾರೆ.

‘ಗಲಭೆ ನಂತರ ಬೊಲ್ಸೊನಾರೊ ವಿಡಿಯೊ ಪೋಸ್ಟ್ ಮಾಡಿದ್ದರೂ, ಅದರಲ್ಲಿನ ವಿಷಯವು ತನಿಖೆ ಮಾಡುವುದನ್ನು ಸಮರ್ಥಿಸಲು ಸಾಕು’ ಎಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ಎದುರಿಸಲು ಇತ್ತೀಚೆಗೆ ರಚಿಸಲಾದ ಗುಂಪಿನ ವಕೀಲರು ಶುಕ್ರವಾರ ವಾದಿಸಿದರು. ಬೊಲ್ಸೊನಾರೊ ಅವರು ಪೋಸ್ಟ್ ಮಾಡಿದ ನಂತರ ಬೆಳಿಗ್ಗೆ ಅದನ್ನು ಅಳಿಸಿದ್ದರು.

ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೆ ಬೊಲ್ಸೊನಾರೊ ಪರ ವಕೀಲ ಫ್ರೆಡರಿಕ್‌ ವಾಸೆಫ್ ಹೇಳಿಕೆ ಬಿಡುಗಡೆ ಮಾಡಿದ್ದು, ‘ಜ.8ರ ಗಲಭೆಗೂ ಮಾಜಿ ಅಧ್ಯಕ್ಷರಿಗೂ ಸಂಬಂಧವಿಲ್ಲ. ಸಾಮಾಜಿಕ ಚಳವಳಿಯೊಂದಿಗೆ ಅವರು ಯಾವುದೇ ಸಂಬಂಧ ಹೊಂದಿಲ್ಲ’ ಎಂದು ಹೇಳಿದ್ದಾರೆ.

ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥರ ಬಂಧನಕ್ಕೆ ವಾರಂಟ್‌:

ಜ.8ರ ಗಲಭೆಗೆ ಸಂಬಂಧಿಸಿದಂತೆ ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥರಿಗೆ ಬ್ರೆಜಿಲ್‌ನ ಸುಪ್ರೀಂ ಕೋರ್ಟ್ ಬಂಧನದ ವಾರಂಟ್ ಹೊರಡಿಸಿದೆ. ಅಮೆರಿಕದಲ್ಲಿ ಇರುವ ಅಧಿಕಾರಿ ಮೂರು ದಿನಗಳಲ್ಲಿ ಮರಳಬೇಕು. ಇಲ್ಲವಾದರೆ ಅವರನ್ನು ಗಡಿಪಾರು ಮಾಡಲು ಮನವಿ ಮಾಡಲಾಗುವುದು ಎಂದು ಕಾನೂನು ಸಚಿವ ಫ್ಲೇವಿಯೊ ಡಿನೊ ಶುಕ್ರವಾರ ಹೇಳಿದ್ದಾರೆ.

ಕಳೆದ ವರ್ಷ ಬ್ರೆಜಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಲಪಂಥೀಯ ಪ್ರತಿಪಾದಕ ಬೊಲ್ಸೊನಾರೊ ಸೋತಿದ್ದರು. ಎಡಪಂಥೀಯ ಒಲವಿರುವ ಲುಯಿಸ್‌ ಇನಾಸಿಯೊ ಲುಲ ಡ ಸಿಲ್ವ ಗೆಲುವು ಸಾಧಿಸಿದ್ದರು. ಆದರೆ, ಸೋಲನ್ನು ಒಪ್ಪಿಕೊಳ್ಳದ ಬೊಲ್ಸೊನಾರೊ ಬೆಂಬಲಿಗರು ಬ್ರೆಜಿಲ್‌ನ ಸಂಸತ್ತು, ಸುಪ್ರೀಂ ಕೋರ್ಟ್‌ ಮತ್ತು ಅಧ್ಯಕ್ಷರ ಅರಮನೆಗೆ ಭಾನುವಾರ ನುಗ್ಗಿ ದಾಂದಲೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT