ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರ ಚುನಾವಣೆ : 41 ಮಂದಿ ಮೇಲಿದೆ ಕ್ರಿಮಿನಲ್ ಪ್ರಕರಣ

Last Updated 8 ಫೆಬ್ರುವರಿ 2023, 9:05 IST
ಅಕ್ಷರ ಗಾತ್ರ

ಅಗರ್ತಲಾ: ಫೆಬ್ರವರಿ 16 ರಂದು ನಡೆಯಲಿರುವ ತ್ರಿಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಒಟ್ಟು 259 ಅಭ್ಯರ್ಥಿಗಳ ಪೈಕಿ 45 ಮಂದಿ ಕೋಟ್ಯಧಿಪತಿಗಳಾಗಿದ್ದು, 41 ಮಂದಿ ಮೇಲೆ ಕ್ರಿಮಿನಲ್‌ ಪ್ರಕರಣಗಳಿವೆ ಎಂದು ವರದಿಯೊಂದು ತಿಳಿಸಿದೆ.

ಆಡಳಿತಾರೂಢ ಬಿಜೆಪಿಯು 17 ಕೋಟ್ಯಧಿಪತಿ ಅಭ್ಯರ್ಥಿಗಳನ್ನು ಹೊಂದಿದೆ. ತಿಪ್ರಾ ಮೋಥಾದ 9 ಮತ್ತು ಸಿಪಿಐ(ಎಂ) 7 ಅಭ್ಯರ್ಥಿಗಳು ಕೋಟ್ಯಧಿಪತಿಗಳು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.

ಕಾಂಗ್ರೆಸ್‌ನಲ್ಲಿ 6 ಕೋಟ್ಯಧಿಪತಿಗಳು, ತೃಣಮೂಲ ಕಾಂಗ್ರೆಸ್‌ನ 4 ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಸಹ ಕೋಟ್ಯಧಿಪತಿಗಳು ಎಂದು ವರದಿ ಹೇಳಿದೆ.

ಚಾರಿಲಂ ಕ್ಷೇತ್ರದಿಂದ ಸ್ಪರ್ಧಿಸಿರುವ ಉಪಮುಖ್ಯಮಂತ್ರಿ ಬಿಜೆಪಿಯ ಜಿಷ್ಣು ದೇವ್ ವರ್ಮಾ ₹15.58 ಕೋಟಿ ಚರ ಮತ್ತು ಸ್ಥಿರ ಆಸ್ತಿ ಹೊಂದಿರುವ ಶ್ರೀಮಂತ ಅಭ್ಯರ್ಥಿ ಎಂದು ವರದಿ ತಿಳಿಸಿದೆ.

ಟೌನ್ ಬರ್ಡೋವಾಲಿ ಕ್ಷೇತ್ರದ ಅಭ್ಯರ್ಥಿ ಹಾಗೂ ಹಾಲಿ ಮುಖ್ಯಮಂತ್ರಿ ಮಾಣಿಕ್ ಸಹಾ ವೈದ್ಯ, ₹13.90 ಕೋಟಿ ಆಸ್ತಿಯೊಂದಿಗೆ ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ ಎಂದು ಎಡಿಆರ್‌ನ ರಾಜ್ಯ ಸಂಯೋಜಕ ಬಿಸ್ವೆಂದು ಭಟ್ಟಾಚಾರ್ಜಿ ತಿಳಿಸಿದರು.

₹12.57 ಕೋಟಿ ಆಸ್ತಿ ಹೊಂದಿರುವ ತಿಪ್ರಾ ಮೋಥಾದ ಅಭಿಜಿತ್ ಸರ್ಕಾರ್ ಅವರು ಮೂರನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. 55 ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿಯು ₹1.86 ಕೋಟಿಯೊಂದಿಗೆ ಗರಿಷ್ಠ ಸರಾಸರಿ ಆಸ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು.

‘ಈ ಸಲ ಒಟ್ಟು ಅಭ್ಯರ್ಥಿಗಳಲ್ಲಿ 41 (ಶೇ 16) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದೆಯೆಂದು ಘೋಷಿಸಿಕೊಂಡಿದ್ದಾರೆ. 2018 ರ ಚುನಾವಣೆಯಲ್ಲಿ 297 ಅಭ್ಯರ್ಥಿಗಳಲ್ಲಿ 22 (7%) ಮಂದಿ ಕ್ರಿಮಿನಲ್ ಮೊಕದ್ದಮೆ ಹೊಂದಿದ್ದರು’ ಎಂದು ಅವರು ಹೇಳಿದರು.

13 ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ 7 (ಶೇ 54) ಜನ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದರೆ, 55 ಬಿಜೆಪಿ ಅಭ್ಯರ್ಥಿಗಳಲ್ಲಿ 9 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.

‌ಎಡರಂಗದ 43 ಅಭ್ಯರ್ಥಿಗಳ ಪೈಕಿ 9 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಎಂಟು ಅಭ್ಯರ್ಥಿಗಳು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿಗಳು.

ಒಟ್ಟು 259 ಅಭ್ಯರ್ಥಿಗಳ ಪೈಕಿ 65 ಮಂದಿ ಪದವೀಧರರು, 55 ಮಂದಿ 12ನೇ ತರಗತಿ ತೇರ್ಗಡೆಯಾಗಿದ್ದು, 39 ಮಂದಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಮೂವತ್ತಾರು ಅಭ್ಯರ್ಥಿಗಳು 8ನೇ ತರಗತಿ ತೇರ್ಗಡೆಯಾಗಿದ್ದಾರೆ ಮತ್ತು ಒಂಬತ್ತು ಮಂದಿ 5ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT