ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದಲ್ಲಿ ಭಾರಿ ಮಳೆ: ಪ್ರವಾಹ ಪೀಡಿತ ಪ್ರದೇಶದಲ್ಲಿ 1,000 ಜನರ ರಕ್ಷಣೆ

Published 30 ಮೇ 2024, 10:53 IST
Last Updated 30 ಮೇ 2024, 10:53 IST
ಅಕ್ಷರ ಗಾತ್ರ

ಇಂಫಾಲ್‌: ಮಣಿಪುರದ ಇಂಫಾಲ್ ಕಣಿವೆಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾಪತಿ ಜಿಲ್ಲೆಯ ಥಾಂಗ್ಲಾಂಗ್ ರಸ್ತೆಯಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಲ್ಲಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಪ್ರವಾಹದಿಂದ ಉಕ್ಕೇರಿದ ಸೇನಾಪತಿ ನದಿಯಲ್ಲಿ 83 ವರ್ಷದ ಮಹಿಳೆಯೊಬ್ಬರು ಮುಳುಗಿ ಮೃತಪಟ್ಟಿದ್ದಾರೆ.

ಇಂಫಾಲ್ ನದಿಯು ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಕಣಿವೆಯಲ್ಲಿನ ನೂರಾರು ಮನೆಗಳಿಗೆ ನೀರು ನುಗ್ಗಿದ್ದರಿಂದ, ಸ್ಥಳೀಯ ನಿವಾಸಿಗಳು ಸಮುದಾಯ ಭವನಗಳಲ್ಲಿ ಆಸರೆ ಪಡೆದಿದ್ದಾರೆ.

ನಿರಂತರ ಮಳೆಯಿಂದಾಗಿ ಇಂಫಾಲ್ ಪೂರ್ವ ಜಿಲ್ಲೆಯ ಕೀರಂಗ್, ಖಬಮ್ ಮತ್ತು ಲೈರಿಯೆಂಗ್ಬಾಮ್ ಲೀಕೈ ಪ್ರದೇಶಗಳ ಬಳಿ ಇಂಫಾಲ್ ನದಿಯ ದಂಡೆಯು ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ. 

ಇಂಫಾಲ್ ಪೂರ್ವ ಜಿಲ್ಲೆಯ ಹೆಯಿಂಗಾಂಗ್ ಮತ್ತು ಖುರೈ ವಿಧಾನಸಭಾ ಕ್ಷೇತ್ರದ ಹಲವು ಕಡೆ ಪ್ರವಾಹದ ನೀರು ಎದೆಮಟ್ಟದವರೆಗೂ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ತಂಡವು ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ವಾಯುಪಡೆಯ ವಿಶೇಷ ವಿಮಾನದ ಮೂಲಕ ಇಂಫಾಲ್‌ಗೆ ಬಂದಿದ್ದು, ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.

ಮೀನುಗಾರರ ನೆರವು: ಬಿಷ್ಣುಪುರ ಜಿಲ್ಲೆಯ ಥಂಗಾದ ಮೀನುಗಾರರು ಸಾಂಪ್ರದಾಯಿಕ ದೋಣಿಗಳನ್ನು ಬಳಸಿಕೊಂಡೇ ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನರನ್ನು ಸ್ಥಳಾಂತರಿಸಲು ಸಹಾಯ ಮಾಡಿದರು.

ರೀಮಲ್ ಅಬ್ಬರ: 31ರವರೆಗೆ ರಜೆ ಘೋಷಣೆ ಮಣಿಪುರದ ಅನೇಕ ಜಿಲ್ಲೆಗಳಿಗೆ ರೀಮಲ್ ಚಂಡಮಾರುತವು ಅಪ್ಪಳಿಸಿದ್ದು ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗಾಗಿ ರಾಜ್ಯ ಸರ್ಕಾರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನದಿಗಳು ಉಕ್ಕಿ ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿವೆ. ರಾಜ್ಯದ ಎಲ್ಲ ಕಚೇರಿಗಳಿಗೆ ಮೇ 31ರವರೆಗೆ ಸರ್ಕಾರವು ರಜೆ ಘೋಷಿಸಿದೆ. ತುರ್ತು ಸಂದರ್ಭ ಹೊರತುಪಡಿಸಿ ಉಳಿದಂತೆ ಮನೆಯೊಳಗೆ ಇರುವಂತೆ ಜನರಲ್ಲಿ ಮನವಿ ಮಾಡಿದೆ.

ಪ್ರವಾಹ: ಜನರ ರಕ್ಷಣೆ ರೀಮಲ್ ಚಂಡಮಾರುತದಿಂದ ನಿರಂತರವಾಗಿ ಸುರಿದ ವರ್ಷಧಾರೆಗೆ ತೀವ್ರವಾಗಿ ಹಾನಿಗೊಳಗಾದ ಮಣಿಪುರದ ಪ್ರವಾಹ ಪೀಡಿತ ಪ್ರದೇಶಗಳಿಂದ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್‌ ಪಡೆಗಳು ಹೇಳಿವೆ. ಇಂಫಾಲ್‌ನ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಸ್ಸಾಂ ರೈಫಲ್ಸ್‌ ಪಡೆಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT