ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಿಧಾನದ ಕತ್ತು ಹಿಸುಕಿದ್ದ ಕಾಂಗ್ರೆಸ್: ಪ್ರಧಾನಿ ಮೋದಿ

Published 30 ಮೇ 2024, 10:35 IST
Last Updated 30 ಮೇ 2024, 10:35 IST
ಅಕ್ಷರ ಗಾತ್ರ

ಹೋಶಿಯಾರ್‌ಪುರ (ಪಂಜಾಬ್): ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ‘ಕತ್ತು ಹಿಸುಕಿ’ ಕೊಂದಿದ್ದ ಕಾಂಗ್ರೆಸ್‌ ಪಕ್ಷ ಈಗ ಸಂವಿಧಾನದ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾಳಿ ನಡೆಸಿದರು.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು 1984ರ ಗಲಭೆಯಲ್ಲಿ ಸಿಖ್ಖರು ಹತ್ಯೆಯಾದಾಗ ಕಾಂಗ್ರೆಸ್‌ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ಆರೋಪಿಸಿದರು.

‘ಹೊತ್ತಿ ಉರಿಯುತ್ತಿದ್ದ ಟೈರ್‌ಗಳನ್ನು ಸಿಖ್ಖರ ಸುತ್ತಲೂ ಹಾಕಿ ಅವರನ್ನು ಕೊಲ್ಲಲಾಯಿತು. ಆಗ ಕಾಂಗ್ರೆಸ್‌ನವರಿಗೆ ಸಂವಿಧಾನದ ಬಗ್ಗೆ ಕಾಳಜಿ ಇರಲಿಲ್ಲ’ ಎಂದು ದೂರಿದರು. ಈ ಬಾರಿಯ ಚುನಾವಣೆಯ ತಮ್ಮ ಕೊನೆಯ ರ್‍ಯಾಲಿಯಲ್ಲೂ ಅವರು ಮೀಸಲಾತಿ, ಭ್ರಷ್ಟಾಚಾರ ಮತ್ತು ರಾಮಮಂದಿರ ವಿಷಯ ಪ್ತಸ್ತಾಪಿಸಿ ಕಾಂಗ್ರೆಸ್‌ ವಿರುದ್ದ ಹರಿಹಾಯ್ದರು.

‘ಈಚೆಗಿನ ದಿನಗಳಲ್ಲಿ ದೇಶದ ಜನರು ‘ಇಂಡಿ’ ಮೈತ್ರಿಕೂಟದ ನಾಯಕರಿಂದ ಸಂವಿಧಾನದ ಕುರಿತ ಮಾತುಗಳನ್ನು ಕೇಳುತ್ತಿದ್ದಾರೆ. ಇದೇ ಮಂದಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದ ಕತ್ತು ಹಿಸುಕಿ ಕೊಂದಿದ್ದರು’ ಎಂದು ಟೀಕಿಸಿದರು.

ಮೋದಿ ಮಾತು...

* ವಿಪಕ್ಷಗಳು ಧರ್ಮದ ಆಧಾರದಲ್ಲಿ ದೇಶ ವಿಭಜನೆಗೆ ಸಂಚು ರೂಪಿಸಿವೆ. ದಲಿತರು ಮತ್ತು ಶೋಷಿತರ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡಲು ಹೊರಟಿವೆ.

* ಕಾಂಗ್ರೆಸ್‌ ಪಕ್ಷವು ಭ್ರಷ್ಟಾಚಾರದಲ್ಲಿ ‘ಡಬಲ್‌ ಪಿಎಚ್‌ಡಿ’ ಮಾಡಿದೆ. ಇನ್ನೊಂದು ಭ್ರಷ್ಟಾಚಾರಿಗಳ ಪಕ್ಷವು (ಎಎಪಿ) ಕಾಂಗ್ರೆಸ್ ಜತೆ ಕೈಜೋಡಿಸಿದೆ.

* ಕಾಂಗ್ರೆಸ್‌ ಮತ್ತು ‘ಇಂಡಿ’ ಒಕ್ಕೂಟದವರು ಓಲೈಕೆ ರಾಜಕಾರಣಕ್ಕಾಗಿ ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಾ ಬಂದರು. ಈಗ ಸಿಎಎಯನ್ನು ವಿರೋಧಿಸುತ್ತಿದ್ದಾರೆ.

* ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ಭಾರತೀಯ ಸೇನೆಯನ್ನು ತನ್ನ ‘ರಾಜಕೀಯ ದಾಳ’ವಾಗಿ ಬಳಸಿಕೊಂಡಿವೆ. ಅದಕ್ಕಿಂತ ದೊಡ್ಡ ಪಾಪ ಬೇರೊಂದಿಲ್ಲ. ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸಲು ಅವರು ತಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ.

* ನಮ್ಮ ಸರ್ಕಾರ ಮೂರನೇ ಅವಧಿಯ ಮೊದಲ 125 ದಿನಗಳಲ್ಲಿ ಏನೇನು ಮಾಡಲಿದೆ ಎಂಬುದರ ನೀಲನಕ್ಷೆ ಈಗಾಗಲೇ ಸಿದ್ದವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT