ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆಯಲ್ಲಿ ಸುರಂಗ ರೈಲು ಮಾರ್ಗ?

ತಲಶ್ಶೇರಿ–ಮೈಸೂರು ರೈಲ್ವೆ ಯೋಜನೆ: ಕೇರಳ ಸರ್ಕಾರದಿಂದ ಹೊಸ ಪ್ರಸ್ತಾವ
Last Updated 9 ಆಗಸ್ಟ್ 2022, 23:15 IST
ಅಕ್ಷರ ಗಾತ್ರ

ನವದೆಹಲಿ: ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಲಶ್ಶೇರಿ– ಮೈಸೂರು ಹಾಗೂ ನಿಲಂಬೂರು ನಂಜನಗೂಡು ರೈಲು ಯೋಜನೆಯ ಅನುಷ್ಠಾನಕ್ಕೆ ಕೇರಳ ಸರ್ಕಾರ ಹೊಸ ಪ್ರಸ್ತಾವ ಸಿದ್ಧಪಡಿಸಿದೆ. ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿಸುರಂಗ ರೈಲು ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ಸಹಮತಿ ಕೇಳಿದೆ.

ತಿರುವಂತಪುರದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಗೃಹ ಸಚಿವಾಲಯದ ಅಂತರ್‌ ರಾಜ್ಯ (ದಕ್ಷಿಣ ವಲಯ) ಪರಿಷತ್ತಿನ ಸ್ಥಾಯಿ ಸಮಿತಿ ಸಭೆಯಲ್ಲಿ ಕೇರಳ ಸರ್ಕಾರದ ಪ್ರತಿನಿಧಿಗಳು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಸಭೆಯಲ್ಲಿ ಹೊಸ ಪ್ರಸ್ತಾವದ ಬಗ್ಗೆ ವಿವರ ನೀಡಿದ್ದ ಕೇರಳ ಸರ್ಕಾರದ ‍ಪ್ರತಿನಿಧಿಗಳು, ‘ನಿಲಂಬೂರು–ನಂಜನಗೂಡು ರೈಲು ಯೋಜನೆಯನ್ನು 2016–17ನೇ ಸಾಲಿನ ರೈಲ್ವೆ ಪಿಂಕ್‌ ‍ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ. ರೈಲ್ವೆ ಇಲಾಖೆ ಹಾಗೂ ಕೇರಳ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಯೋಜನೆಯ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯ ಸಮೀಕ್ಷೆಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಿಲ್ಲ’ ಎಂದು ಹೇಳಿದ್ದರು.

‘ಯೋಜನೆ ಕಾರ್ಯಗತಗೊಳಿಸುವ ಕುರಿತು ಕೇರಳ ಹಾಗೂ ಕರ್ನಾಟಕ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ತಲಶ್ಶೇರಿ–ಮೈಸೂರು ನಡುವೆ ಪರ್ಯಾಯ ಮಾರ್ಗದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ
ಕೇರಳ ಸರ್ಕಾರ ಪ್ರಸ್ತಾವ ಸಿದ್ಧಪಡಿಸಿತ್ತು.ಸಾರ್ವಜನಿಕರ ಆಕ್ಷೇಪದ ಕಾರಣ ಈ ಮಾರ್ಗದ ಸಮೀಕ್ಷೆಗೂ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ, ನಾಗರಹೊಳೆ ಅರಣ್ಯದ ಬಫರ್‌ ಝೋನ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಹೊಸ ಪ್ರಸ್ತಾಪ ಸಿದ್ಧಪಡಿಸಲಾಗಿದೆ. ಅನುಮತಿಗಾಗಿ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ತಿಳಿಸಿದ್ದರು.

ಈ ‍‍ಪ್ರಸ್ತಾವದ ಬಗ್ಗೆ ಪರಿಶೀಲನೆ ನಡೆಸಿ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಸಭೆಯಲ್ಲಿ ಈ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.

ತಲಶ್ಶೇರಿ–ಮೈಸೂರು ಪರ್ಯಾಯ ಮಾರ್ಗವು ತಲಶ್ಶೇರಿಯಲ್ಲಿ ಆರಂಭವಾಗಿ ಮೈಸೂರು ಸಮೀಪದ ಕಡಕೋಳದಲ್ಲಿ ಕೊನೆಗೊಳ್ಳಲಿದೆ. ಈ ಮಾರ್ಗವು ಎಚ್‌.ಡಿ.ಕೋಟೆ, ಅಂತರಸಂತೆ ಗಡಿ ಮೂಲಕ ಕೇರಳದ ಬಾವಲಿ ಗ್ರಾಮದ ಮೂಲಕ ಹಾದು ಹೋಗಲಿದೆ. ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದ ಅಂತರಸಂತೆ ವಿಭಾಗದಲ್ಲಿ 22 ಕಿ.ಮೀ. ಸುರಂಗ ನಿರ್ಮಾಣ ಮಾಡಲು ಯೋಜಿಸಲಾಗಿದೆ.

ವನ್ಯಜೀವಿಗಳಿಗೆ ತೊಂದರೆ: ಗುಬ್ಬಿ

ಬೆಂಗಳೂರಿನಲ್ಲಿ ಒಂದು ಕಿ.ಮೀ. ಮೇಲ್ಸೇತುವೆ ಹಾಗೂಸುರಂಗ ನಿರ್ಮಾಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತಿದ್ದೇವೆ ಎಂಬುದು ನಮಗೆಲ್ಲ ಗೊತ್ತಿದೆ. ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸುರಂಗ ನಿರ್ಮಾಣ ಕಾಮಗಾರಿ ಇದಕ್ಕಿಂತ ಭಿನ್ನವಾಗಿ ನಡೆಯುವುದಿಲ್ಲ. ಇದರಿಂದ ವನ್ಯಜೀವಿಗಳಿಗೆ ತೊಂದರೆ ಆಗಲಿದೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಬಿಟ್ಟು ಬೇರೆ ಕಡೆಯಲ್ಲಿ ಯೋಜನೆ ಅನುಷ್ಠಾನ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಕಾಡಿನೊಳಗೆ ಯೋಜನೆ ಅನುಷ್ಠಾನ ಮಾಡಬೇಕು ಎಂಬ ಹಠ ಏಕೆ.

ಸಂಜಯ್‌ ಗುಬ್ಬಿ, ವನ್ಯಜೀವಿ ವಿಜ್ಞಾನಿ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಆ ಬಳಿಕ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡಲಿದೆ.

ಗೌರವ್‌ ಗುಪ್ತ,ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ

’ಸುರಂಗ ಮಾರ್ಗವೇ ಉತ್ತಮ’

ಇದು ರೈಲ್ವೆ ಇಲಾಖೆಯ ಯೋಜನೆ. ಯೋಜನೆಯ ಬಗ್ಗೆ 2016–17ನೇ ಸಾಲಿನ ರೈಲ್ವೆ ಪಿಂಕ್‌ ಬುಕ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಉತ್ತಮ ಸಮನ್ವಯದಿಂದ ಕಾರ್ಯನಿರ್ವಹಿಸುವ ಉದ್ದೇಶದಿಂದ ಕೆಆರ್‌ಡಿಸಿಎಲ್‌ಗೆ ಯೋಜನೆಯನ್ನು ಹಸ್ತಾಂತರಿಸಲಾಗಿದೆ. ಆನೆಗಳ ಕಾರಿಡಾರ್ ಇರುವುದರಿಂದ ಸುರಂಗ ಮಾರ್ಗ ಮಾಡುವಂತೆ ರೈಲ್ವೆ ಇಲಾಖೆ ಸಲಹೆ ನೀಡಿದೆ.

ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT