ಪಟ್ನಾ: ಬಿಜೆಪಿಯ ಮೈತ್ರಿ ತೊರೆದು ಎರಡು ಬಾರಿ ಆರ್‌ಜೆಡಿ ಜೊತೆಗೆ ಕೈಜೋಡಿಸಿದ್ದನ್ನು ‘ರಾಜಕೀಯ ಪ್ರಮಾದ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣ್ಣಿಸಿದ್ದಾರೆ. ಮತ್ತೆಂದಿಗೂ ಲಾಲು ಪ್ರಸಾದ್ ಅವರ ಆರ್‌ಜೆಡಿ ಪಕ್ಷದ ಜೊತೆಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಇಲ್ಲಿ ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಬಿಜೆಪಿ ಅಧ್ಯಕ್ಷ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ಈ ಮಾತು ಹೇಳಿದರು.
ಸೆಪ್ಟೆಂಬರ್ 3ರಂದು ಬಿಹಾರ ವಿಧಾನಸಭೆಯ ವಿರೋಧಪಕ್ಷದ ನಾಯಕ, ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಜೊತೆಗೆ ಗೋಪ್ಯ ಮಾತುಕತೆ ನಡೆಸಿದ್ದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಾಹಿತಿ ಆಯುಕ್ತರ ನೇಮಕಾತಿಗೆ ಸಂಬಂಧಿಸಿದತೆ ನಾವು ಭೇಟಿ ಮಾಡಿದ್ದೆವು ಎಂದು ತೇಜಸ್ವಿ ಯಾದವ್ ಅವರು ಬಳಿಕ ಸ್ಪಷ್ಟಪಡಿಸಿದ್ದರು.
ಈ ಕುರಿತ ಊಹಾಪೋಹಗಳಿಗೆ ಬಿಜೆಪಿ ಅಧ್ಯಕ್ಷರ ಸಮ್ಮುಖದಲ್ಲಿಯೇ ಮುಖ್ಯಮಂತ್ರಿ ಈ ಸ್ಪಷ್ಟನೆ ನೀಡಿದರು. ನಿತೀಶ್ ಅವರ ಜೆಡಿಯು ಕೇಂದ್ರದಲ್ಲಿ ಬಿಜೆಪಿ ಜೊತೆ ಮೈತ್ರಿ ಹೊಂದಿದ್ದು, ಪಕ್ಷದ ಇಬ್ಬರು ಸಚಿವರಾಗಿದ್ದಾರೆ. ಈಗಾಗಿ ನಕಾರಾತ್ಮಕ ಸಂದೇಶ ಹೋಗಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.