ಸುಕ್ಮಾ: ಭದ್ರತಾ ಸಿಬ್ಬಂದಿ ಮೇಲೆ ನಡೆದ ದಾಳಿಗಳಲ್ಲಿ ಭಾಗಿಯಾಗಿದ್ದ ಇಬ್ಬರು ನಕ್ಸಲರು ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಪೊಲೀಸರಿಗೆ ಶರಣಾಗಿದ್ದಾರೆ.
ಈ ಇಬ್ಬರೂ ನಕ್ಸಲರ ಪತ್ತೆಗೆ ಶೋಧ ನಡೆಸುತ್ತಿದ್ದ ಪೊಲೀಸರು ಅವರ ಬಗ್ಗೆ ಸುಳಿವು ನೀಡಿದವರಿಗೆ ತಲಾ ₹8 ಲಕ್ಷದಂತೆ ಒಟ್ಟು ₹16 ಲಕ್ಷ ಬಹುಮಾನ ಘೋಷಿಸಿದ್ದರು.
ಟೊಳ್ಳು ವಿಚಾರಗಳಿಂದ ಪ್ರೇರಿತರಾಗಿ ತಾವು ಎಸಗಿದ ಕೃತ್ಯಗಳ ಬಗ್ಗೆ ಬೇಸರಗೊಂಡ ನಕ್ಸಲರು, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಹಿರಿಯ ಅಧಿಕಾರಿಗಳ ಬಳಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ರಾಜ್ಯ ಸರ್ಕಾರದ ನಕ್ಸಲ್ ನಿವಾರಣೆ ನೀತಿ ಮತ್ತು ಪೊಲೀಸರ ಪುನರ್ವಸತಿ ಯೋಜನೆಗಳಿಂದ ಪ್ರಭಾವಿತಗೊಂಡು ತಾವು ಶರಣಾಗಿರುವುದಾಗಿ ತಿಳಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದಕ್ಷಿಣ ಬಸ್ತಾರ್‌ನಲ್ಲಿ ಸಕ್ರಿಯವಾಗಿದ್ದ ‘ಪಿಎಲ್‌ಜಿಎ’ ನಕ್ಸಲ್ ಗುಂಪಿನ ಸದಸ್ಯರಾಗಿದ್ದ ಮದ್ಕಮ್ ಸನ್ನಾ (35) ಮತ್ತು ಮದ್ಕಮ್ ಮುಯಾ (22) ಶರಣಾದ ನಕ್ಸಲರು.
ಈ ಇಬ್ಬರಿಗೂ ತಲಾ ₹25,000 ನೆರವು ನೀಡಲಾಗಿದ್ದು, ಸರ್ಕಾರದ ನೀತಿಯಂತೆ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.