ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘಾಡಿ ಸರ್ಕಾರ ಮರುಸ್ಥಾಪನೆ ಅಸಾಧ್ಯ, ರಾಜ್ಯಪಾಲರ ಕ್ರಮ ಕಾನೂನುಬಾಹಿರ: ಸುಪ್ರೀಂ ಕೋರ್ಟ್

Published 11 ಮೇ 2023, 7:19 IST
Last Updated 11 ಮೇ 2023, 7:19 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ರಾಜ್ಯದ ರಾಜ್ಯಪಾಲರಿಗೆ ರಾಜ್ಯದ ರಾಜಕೀಯ ಬಿಕ್ಕಟ್ಟಿನಲ್ಲಿ, ಪಕ್ಷಗಳ ನಡುವಿನ ಅಥವಾ ಪಕ್ಷಗಳ ಆಂತರಿಕ ಕಲಹದಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ. 

ಮಹಾರಾಷ್ಟ್ರದ ಹಿಂದಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಬಹುಮತ ಸಾಬೀತುಪಡಿಸುವಂತೆ ಅಂದಿನ ರಾಜ್ಯಪಾಲ ಭಗತ್ ಸಿಂಗ್‌ ಕೊಶಿಯಾರಿ ಅವರು ತಮ್ಮ ವಿವೇಚನೆ ಬಳಸಿ ನೀಡಿರುವ ಆದೇಶ ಕಾನೂನುಬದ್ಧವಾಗಿರಲಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಗುರುವಾರ ತೀರ್ಪು ನೀಡಿದೆ.

ಜತೆಗೆ, ಉದ್ಧವ್‌ ಠಾಕ್ರೆ ಬಹುಮತ ಸಾಬೀತುಪಡಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಏಕನಾಥ ಶಿಂದೆ ಅವರಿಗೆ ಸರ್ಕಾರ ರಚಿಸಲು 2022ರ ಜೂನ್‌ 30ರಂದು ರಾಜ್ಯಪಾಲರು ನೀಡಿದ್ದ ಆಹ್ವಾನ ಸಮರ್ಥನೀಯ ಎಂದೂ ಪೀಠ ಹೇಳಿದೆ. ‌ಬಹುಮತ ಸಾಬೀತುಪಡಿಸುವ ಮುನ್ನವೇ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪೀಠವು 141 ಪುಟಗಳ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

‘ಸ್ವಯಂಪ್ರೇರಣೆಯಿಂದ ಸಲ್ಲಿಸಿದ ರಾಜೀನಾಮೆಯನ್ನು ಈ ನ್ಯಾಯಾಲಯವು ರದ್ದುಗೊಳಿಸಲು ಸಾಧ್ಯವಿಲ್ಲ. ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ತಪ್ಪಿಸಿದ್ದರೆ, ಅವರ ನೇತೃತ್ವದ ಸರ್ಕಾರವನ್ನು ಮರುಸ್ಥಾಪಿಸುವ ಕುರಿತು ಪರಿಗಣಿಸಬಹುದಿತ್ತು’ ಎಂದು ಪೀಠ ತಿಳಿಸಿದೆ. 

ಕಳೆದ ವರ್ಷ ಶಿಂದೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ಬಂಡಾಯ ಎದ್ದು ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಸದನದಲ್ಲಿ ಅತಿ ಹೆಚ್ಚು, ಅಂದರೆ 106 ಸದಸ್ಯರನ್ನು ಹೊಂದಿರುವ ಬಿಜೆಪಿಯಲ್ಲದೆ ಎಂಟು ಪಕ್ಷೇತರ ಶಾಸಕರು ಶಿಂದೆ ಅವರಿಗೆ ಬೆಂಬಲ ನೀಡಿದ್ದರು. ಸರ್ಕಾರ ರಚಿಸಲು ಶಿಂದೆ ಅವರಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದರು. ಮುಖ್ಯಮಂತ್ರಿಯಾಗಿ ಶಿಂದೆ ಹಾಗೂ ಉಪಮುಖ್ಯಮಂತ್ರಿಯಾಗಿ ದೇವೆಂದ್ರ ಫಡಣವೀಸ್‌ ಅಧಿಕಾರ ಸ್ವೀಕರಿಸಿದ್ದರು. 

ಈ ಪ್ರಕರಣ ಸಂಬಂಧ ಶಿಂದೆ ಹಾಗೂ 15 ಶಾಸಕರನ್ನು ಅನರ್ಹಗೊಳಿಸಬೇಕು ಮತ್ತು ಮಹಾವಿಕಾಸ ಅಘಾಡಿ ಸರ್ಕಾರವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿ ಉದ್ಧವ್‌ ಠಾಣೆ ಬಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ವಿವಾದ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅಂದಿನ ಸರ್ಕಾರ ಸದನದ ವಿಶ್ವಾಸ ಕಳೆದುಕೊಂಡಿದೆ ಎಂದು ಅನುಮಾನಿಸಲು ರಾಜ್ಯಪಾಲರಿಗೆ ವಸ್ತುನಿಷ್ಠ ಪುರಾವೆಗಳು ದೊರೆತಿರಲಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ. 

ಚುನಾಯಿತ ಪ್ರತಿನಿಧಿಗಳಿಗೆ ಜನರ ಪರವಾಗಿ ಕೆಲಸ ಮಾಡಲು ಸಂವಿಧಾನ ಅವಕಾಶ ಕಲ್ಪಿಸಿದೆ. ಆದರೆ, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಹುದ್ದೆಯ ಹೊರತಾಗಿಯೂ ಚುನಾಯಿತರು ಅಲ್ಲದೆ ಇರುವ ಕಾರಣಕ್ಕೆ ಸೀಮಿತ ವಿವೇಚನೆ ಅಧಿಕಾರಗಳನ್ನು ಹೊಂದಿರುತ್ತಾರೆ. ರಾಜ್ಯಪಾಲರು ಸಂಪುಟ ಸಚಿವರ ನೆರವು ಮತ್ತು ಸಲಹೆ ಇಲ್ಲದೆ ಕೆಲಸ ಮಾಡುವುದು ಒಂದು ವಿಶೇಷ ಪ್ರಕರಣವಾಗಿದೆ ಮತ್ತು ಅಂತಹ ನಡೆಗಳು ಸಾಂವಿಧಾನಿಕ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರಲಿವೆ ಎಂದು ಪೀಠ ಹೇಳಿದೆ. 

ರಾಜ್ಯಪಾಲರು ರಾಜ್ಯ ಸರ್ಕಾರದ ನಾಮಸೂಚಕ ನಾಯಕರಾಗಿದ್ದಾರೆ. ಅವರು ಸಾಂವಿಧಾನಿಕ ಹುದ್ದೆ ಹೊಂದಿದ್ದಾರೆ. ಅವರು ತಮ್ಮ ಸಾಂವಿಧಾನಿಕ ಅಧಿಕಾರದ ಮಿತಿಯನ್ನು ಅರಿತಿರಬೇಕು. ಅವರು ತಮ್ಮ ವ್ಯಾಪ್ತಿಯಲ್ಲಿ ಇರದ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ. 

ಯಾವುದೇ ಪಕ್ಷಕ್ಕೆ ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಲು ನಿರ್ದಿಷ್ಟ ಕಾರಣವಿರಬೇಕು. ಈ ಪ್ರಕರಣದಲ್ಲಿ ರಾಜ್ಯಪಾಲರಿಗೆ ಪ್ರಸ್ತುತ ಸರ್ಕಾರ ಸದನದ ವಿಶ್ವಾಸ ಕಳೆದುಕೊಂಡಿದೆ ಎಂಬುದನ್ನು ಸೂಚಿಸುವಂತಹ ಯಾವುದೇ ವಸ್ತುನಿಷ್ಠ ಕಾರಣವಿರಲಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ರಾಜ್ಯಪಾಲರು ವಿವೇಚನೆ ಬಳಸಿ ನೀಡಿದ ಆದೇಶ ಕಾನೂನುಬದ್ಧವಾಗಿರಲಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ಶಿಂದೆ ಬಣದ ನಾಮನಿರ್ದೇಶನದ ಆಧಾರದಲ್ಲಿ ಶಿವಸೇನೆಯ ಮುಖ್ಯ ಸಚೇತಕರನ್ನಾಗಿ ಭರತ್‌ ಗೊಗವಾಲೆ ಅವರನ್ನು ನೇಮಕ ಮಾಡಿರುವ ಸ್ಪೀಕರ್‌ ತೀರ್ಮಾನ ಕಾನೂನುಬಾಹಿರ ಎಂದು ಪೀಠ ತೀರ್ಪು ನೀಡಿದೆ. 

ಮುಖ್ಯ ಸಚೇತಕರನ್ನು ಶಾಸಕಾಂಗ ಪಕ್ಷ ನೇಮಿಸುತ್ತದೆಯೇ ಹೊರತು ರಾಜಕೀಯ ಪಕ್ಷವಲ್ಲ ಎಂಬ ಶಿಂದೆ ಬಣದ ವಾದವನ್ನು ನ್ಯಾಯಾಲಯ ಒಪ್ಪಿಲ್ಲ. 

ಇನ್ನೊಂದು ಸುತ್ತಿನ ಕಾನೂನು ಹೋರಾಟಕ್ಕೆ ಹಾದಿ?

ಸಂವಿಧಾನದ 164 (1 ಬಿ) ಪರಿಚ್ಛೇದವನ್ನು ಉಲ್ಲೇಖಿಸಿದ ನ್ಯಾಯಪೀಠ, ಯಾವುದೇ ಶಾಸಕ ಅಥವಾ ವಿಧಾನ ಪರಿಷತ್‌ನ ಸದಸ್ಯರು 10ನೇ ಶೆಡ್ಯೂಲ್‌ನ ಎರಡನೇ ಪ್ಯಾರಾ ಅನ್ವಯ ಅನರ್ಹಗೊಂಡಿದ್ದರೆ ಅವರನ್ನು ಸಚಿವರನ್ನಾಗಿ ನೇಮಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದೆ. 

ನ್ಯಾಯಮೂರ್ತಿ ಎಂ.ಆರ್‌.ಷಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ.ಎಸ್‌.ನರಸಿಂಹ ಅವರನ್ನು ಒಳಗೊಂಡ ಪೀಠ ತನ್ನ ತೀರ್ಪಿನಲ್ಲಿ, ನಬಮ್‌ ರೆಬಿಯಾ ಪ್ರಕರಣದಲ್ಲಿ 2016ರಲ್ಲಿ ಸಾಂವಿಧಾನಿಕ ಪೀಠ ತೀರ್ಪನ್ನು ಉಲ್ಲೇಖಿಸಿದೆ. ಈ ತೀರ್ಪಿನಲ್ಲಿ ತಮ್ಮ ವಿರುದ್ಧದ ಅನರ್ಹತೆಯ ನಿಲುವಳಿ ಬಾಕಿ ಇರುವಾಗ ಇತರರ ಅನರ್ಹತೆಯ ಅರ್ಜಿಯನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಇರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. 

ಈ ತೀರ್ಪಿನೊಂದಿಗೆ ಸ್ಪೀಕರ್ ರಾಹುಲ್‌ ನಾರ್ವೆಕರ್ ಅವರು ಠಾಕ್ರೆ ಮತ್ತು ಶಿಂದೆ ಬಣ ಪರಸ್ಪರರ ವಿರುದ್ಧ ಸಲ್ಲಿಸಿರುವ ಅನರ್ಹತೆಯ ಅರ್ಜಿಯನ್ನು ನಿರ್ಧರಿಸಬಹುದಾಗಿದೆ. ’ಇದು ಅಪರೂಪದ ಸನ್ನಿವೇಶವಲ್ಲ. ಆದ್ದರಿಂದ ಅನರ್ಹತೆಯ ಅರ್ಜಿಗಳನ್ನು ನ್ಯಾಯಾಲಯ ತರಾತುರಿಯಲ್ಲಿ ಇತ್ಯರ್ಥಗೊಳಿಸಬೇಕಿಲ್ಲ’ ಎಂದು ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಸ್ಪೀಕರ್‌ ನಿರ್ದಿಷ್ಟ ಅವಧಿಯಲ್ಲಿ ಅನರ್ಹತೆಯ ಅರ್ಜಿಗಳ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ತೀರ್ಪು ನೀಡಿದೆ. 

ಆದರೆ, ಬಿಜೆಪಿ ಶಾಸಕರಾಗಿದ್ದ ನಾರ್ವೆಕರ್ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಇನ್ನೊಂದು ಸುತ್ತಿನ ಕಾನೂನು ಹೋರಾಟಕ್ಕೆ ದಾರಿಯಾಗಲಿದೆ. 

ಅನರ್ಹತೆಯ ಅರ್ಜಿಗಳು ನಿರ್ಣಯಕ್ಕೆ ಬಾಕಿ ಇರುವ ಹಂತದಲ್ಲಿ ಶಾಸಕರು ಸದನದ ಕಲಾಪದಲ್ಲಿ ಪಾಲ್ಗೊಳ್ಳುವ ಹಕ್ಕು ಹೊಂದಿರುತ್ತಾರೆ ಎಂದು ಪೀಠ ಸ್ಪಷ್ಟಪಡಿಸಿದೆ. 

ಸುಪ್ರೀಂ ಕೋರ್ಟ್‌ ತೀರ್ಪು ‍ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಕಾರ್ಯಕರ್ತರು ನಾಗ್ಪುರದಲ್ಲಿ ಗುರುವಾರ ಸಂಭ್ರಮಿಸಿದರು
ಸುಪ್ರೀಂ ಕೋರ್ಟ್‌ ತೀರ್ಪು ‍ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಕಾರ್ಯಕರ್ತರು ನಾಗ್ಪುರದಲ್ಲಿ ಗುರುವಾರ ಸಂಭ್ರಮಿಸಿದರು–ಪಿಟಿಐ ಚಿತ್ರ

ಶಿವಸೇನಾ ಒಡಕು– ಘಟನೆಗಳ ಮೆಲುಕು

ಜೂನ್‌ 21, 2022: ಉದ್ಧವ್‌ ಠಾಕ್ರೆ ವಿರುದ್ಧ ಏಕನಾಥ ಶಿಂದೆ ಬಂಡಾಯ. ಮಹಾ ವಿಕಾಸ್‌ ಅಘಾಡಿ (ಎಂವಿಎ) ನೇತೃತ್ವದ ಸರ್ಕಾರದ ಕಣ್ತಪ್ಪಿಸಿ, 12 ಶಾಸಕರೊಂದಿಗೆ ಗುಜರಾತ್‌ಗೆ ಪ್ರಯಾಣ.

ಜೂನ್ 22: ಶಿಂದೆ ಅವರೊಂದಿಗೆ ಗುರುತಿಸಿಕೊಂಡ ಬಂಡಾಯ ಶಾಸಕರ ಸಂಖ್ಯೆ ಹೆಚ್ಚಳ. ಬೆಂಬಲಿಗ ಶಾಸಕರೊಂದಿಗೆ ಅಸ್ಸಾಂನ ಗುವಾಹಟಿಗೆ ಏಕನಾಥ ಶಿಂದೆ ಪ್ರಯಾಣಿಸಿದರು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ವರ್ಷಾ’ ತೊರೆದ ಉದ್ಧವ್‌ ಠಾಕ್ರೆ ತಮ್ಮ ಖಾಸಗಿ ಬಂಗಲೆ ‘ಮಾತೋಶ್ರೀ’ಗೆ ತೆರಳಿದರು.

ಜೂನ್‌ 23: ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಶಿಂದೆ, ಈ ಕಾರ್ಯದಲ್ಲಿ ನೆರವು ನೀಡುವುದಾಗಿ ‘ಮಹಾಶಕ್ತಿ’ ಭರವಸೆ ನೀಡಿದೆ ಎಂದು ಹೇಳಿದರು.

ಜೂನ್‌ 24: ಶಿವಸೇನಾದ 40 ಶಾಸಕರು, ಪಕ್ಷೇತರ ಹಾಗೂ ಸಣ್ಣ ಪಕ್ಷಗಳ ಒಟ್ಟು 10 ಶಾಸಕರ ಬೆಂಬಲ ತಮಗೆ ಇರುವುದಾಗಿ ಶಿಂದೆ ಹೇಳಿಕೊಂಡರು.

ಜೂನ್ 25: ಸದನದ ನಾಯಕ ಅಜಯ್‌ ಚೌಧರಿ ಅವರ ಸೂಚನೆಯನ್ನು ಪಾಲನೆ ಮಾಡದ್ದಕ್ಕಾಗಿ ಅನರ್ಹಗೊಳಿಸುವುದಾಗಿ ಶಿವಸೇನಾದ 16 ಶಾಸಕರಿಗೆ ಡೆಪ್ಯುಟಿ ಸ್ಪೀಕರ್ ನರಹರಿ ಜೀರ್ವಾಲ್‌ ನೋಟಿಸ್‌ ಜಾರಿ ಮಾಡಿದರು. ಇನ್ನೊಂದೆಡೆ, ಡೆಪ್ಯುಟಿ ಸ್ಪೀಕರ್ ಜೀರ್ವಾಲ್‌ ವಿರುದ್ಧ ಇಬ್ಬರು ಪಕ್ಷೇತರ ಶಾಸಕರು ಅವಿಶ್ವಾಸ ನಿರ್ಣಯ ಮಂಡಿಸಿದರು

ಜೂನ್ 26: ತಮ್ಮನ್ನು ಅನರ್ಹಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪ್ರಶ್ನಿಸಿ ಏಕನಾಥ ಶಿಂದೆ ಗುಂಪಿನಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ

ಜೂನ್ 28: ಉದ್ಧವ್‌ ಠಾಕ್ರೆ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಅವರಿಂದ ಅವಿಶ್ವಾಸ ನಿರ್ಣಯ ಮಂಡನೆ

ಜೂನ್ 29: ಜೂನ್ 30ರ ಒಳಗಾಗಿ ವಿಶ್ವಾಸ ಮತ ಯಾಚನೆ ಮಾಡಿ, ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಆದೇಶಿಸಿದರು.

ಜೂನ್ 29:ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್‌ ಠಾಕ್ರೆ ರಾಜೀನಾಮೆ. ಎಂವಿಎ ಅಂಗಪಕ್ಷ ಎನ್‌ಸಿಪಿಯ ವರಿಷ್ಠ ಶರದ್‌ ಪವಾರ್‌ ಹಾಗೂ ಕಾಂಗ್ರೆಸ್‌ ನಾಯಕರೊಂದಿಗೆ ಅವರು ಸಮಾಲೋಚನೆ ನಡೆಸಿರಲಿಲ್ಲ

ಜೂನ್ 30: ಏಕನಾಥ ಶಿಂದೆ ಹಾಗೂ ದೇವೇಂದ್ರ ಫಡಣವೀಸ್‌ ಅವರು ರಾಜ್ಯಪಾಲ ಕೋಶ್ಯಾರಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಸಂಬಂಧ ಹಕ್ಕು ಮಂಡಿಸಿದರು. ನಂತರ ಮುಖ್ಯಮಂತ್ರಿಯಾಗಿ ಶಿಂದೆ, ಉಪಮುಖ್ಯಮಂತ್ರಿಯಾಗಿ ಫಡಣವೀಸ್ ಪ್ರಮಾಣ

ಜುಲೈ 3: ಬಿಜೆಪಿಯಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ, ಕೊಲಾಬಾ ಶಾಸಕ ರಾಹುಲ್‌ ನಾರ್ವೇಕರ್ ವಿಧಾನಸಭೆ ಸ್ಪೀಕರ್‌ ಆಗಿ ಆಯ್ಕೆ

ಜುಲೈ 4: ಶಿಂದೆ–ಫಡಣವೀಸ್‌ ನೇತೃತ್ವದ ಸರ್ಕಾರಕ್ಕೆ ವಿಶ್ವಾಸ ಮತದಲ್ಲಿ ಗೆಲುವು. ಶಿವಸೇನಾ–ಬಿಜೆಪಿ ಸರ್ಕಾರದ ಪರ 164 ಹಾಗೂ ವಿರುದ್ಧವಾಗಿ 99 ಮತ ಚಲಾವಣೆ

ಆಗಸ್ಟ್‌ 9: ಸಂಪುಟ ವಿಸ್ತರಣೆ. 18 ಸಚಿವರು ಸಂಪುಟ ಸೇರ್ಪಡೆ. ಸಂಪುಟ ಸಂಖ್ಯಾಬಲ 20ಕ್ಕೆ ಹೆಚ್ಚಳ

ಅಕ್ಟೋಬರ್ 8: ಶಿವಸೇನಾ ಹೆಸರು ಹಾಗೂ ಪಕ್ಷದ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ ಅಮಾನತಿನಲ್ಲಿಟ್ಟು ಚುನಾವಣಾ ಆಯೋಗ ಆದೇಶ

ಅಕ್ಟೋಬರ್ 10–11: ಶಿವಸೇನಾ (ಉದ್ಧವ್‌ ಬಾಳಾಸಾಹೇಬ ಠಾಕ್ರೆ) ಬಣಕ್ಕೆ ಪಕ್ಷದ ಚಿಹ್ನೆಯಾಗಿ ಪಂಜು ಹಾಗೂ ಏಕನಾಥ ಶಿಂದೆ ನೇತೃತ್ವದ ಶಿವಸೇನಾಕ್ಕೆ ‘ಎರಡು ಖಡ್ಗಗಳು ಹಾಗೂ ಗುರಾಣಿ’ ಚಿಹ್ನೆ ಹಂಚಿಕೆ ಮಾಡಿ ಚುನಾವಣಾ ಆಯೋಗ ಆದೇಶ

ಫೆಬ್ರುವರಿ 17, 2023: ಏಕನಾಥ ಶಿಂದೆ ನೇತೃತ್ವದ ಬಣವನ್ನು ನಿಜವಾದ ಶಿವಸೇನಾ ಎಂದು ಚುನಾವಣಾ ಆಯೋಗ ಘೋಷಣೆ

ಮಾರ್ಚ್ 16: ಶಿವಸೇನಾ ಇಬ್ಭಾಗವಾದ ಪ್ರಕರಣ ಕುರಿತು ವಿಚಾರಣೆ. ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್‌

ನೈತಿಕ ನೆಲೆಗಟ್ಟಿನಲ್ಲಿ ರಾಜೀನಾಮೆ: ಠಾಕ್ರೆ

‘ಅವರು (ಶಿಂದೆ ಬಣದ ಶಾಸಕರು) ನಮ್ಮ ಪಕ್ಷಕ್ಕೆ ಮತ್ತು ನನ್ನ ತಂದೆಯವರ ಪರಂಪರೆಗೆ ದ್ರೋಹ ಬಗೆದರು. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕಾನೂನಾತ್ಮಕವಾಗಿ ತಪ್ಪಿರಬಹುದು. ಆದರೆ, ನೈತಿಕ ನೆಲೆಗಟ್ಟಿನಲ್ಲಿ ಸ್ಥಾನ ತೊರೆದಿದ್ದೆ’ ಎಂದು ಉದ್ಧವ್‌ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. 

ಭಯದಿಂದ ರಾಜೀನಾಮೆ: ಫಡಣವೀಸ್‌ 

’ಇದು ಪ್ರಜಾಪ್ರಭುತ್ವದ ಹಾಗೂ ಅದರ ಪ್ರಕ್ರಿಯೆಗೆ ದೊರೆತ ಗೆಲುವು. ಮಹಾ ವಿಕಾಸ ಅಘಾಡಿಯ ಪಿತೂರಿಗೆ ಇಂದು ಸೋಲಾಗಿದೆ. ಉದ್ಧವ್‌ ಠಾಕ್ರೆ ನೈತಿಕತೆ ಬಗ್ಗೆ ಮಾತನಾಡುವುದು ಸರಿ ಕಾಣುವುದಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜತೆಗೆ ಹೋದಾಗ ನೈತಿಕತೆ ಮರೆತು ಬಿಟ್ಟಿದ್ದಾರೆ. ಅವರು ರಾಜೀನಾಮೆ ನೀಡಿದ್ದು ನೈತಿಕ ನೆಲೆಗಟ್ಟಿನಲ್ಲಿ ಅಲ್ಲ. ತಮ್ಮ ಜತೆಗೆ ಇದ್ದವರೆಲ್ಲ ದೂರವಾಗಿದ್ದಕ್ಕೆ ಭಯಗೊಂಡು ಸ್ಥಾನ ತ್ಯಜಿಸಿದರು’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪ್ರತಿಕ್ರಿಯಿಸಿದರು. 

ನಾನು ರಾಜೀನಾಮೆ ನೀಡಿದ್ದು ಕಾನೂನಾತ್ಮಕವಾಗಿ ತಪ್ಪಿರಬಹುದು. ಆದರೆ, ನೈತಿಕ ನೆಲೆಗಟ್ಟಿನಲ್ಲಿ ಸ್ಥಾನ ತೊರೆದಿದ್ದ.
-ಉದ್ಧವ್‌ ಠಾಕ್ರೆ, ಶಿವಸೇನಾ (ಉದ್ಧವ್‌ ಬಣ) ಮುಖ್ಯಸ್ಥ
ಇದು ಪ್ರಜಾಪ್ರಭುತ್ವದ ಹಾಗೂ ಅದರ ಪ್ರಕ್ರಿಯೆಗೆ ದೊರೆತ ಗೆಲುವು. ಮಹಾ ವಿಕಾಸ ಅಘಾಡಿಯ ಪಿತೂರಿಗೆ ಇಂದು ಸೋಲಾಗಿದೆ.
–ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT