ಲಖನೌ: ಉತ್ತರ ಪ್ರದೇಶ ಸರ್ಕಾರವು ಮದರಸಾಗಳಿಗೆ ಮಾನ್ಯತೆ ನೀಡಲು ಎರಡು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.
ಮಾನ್ಯತೆ ಪಡೆಯದ ಮದರಸಾಗಳಲ್ಲಿನ (ಇಸ್ಲಾಮಿಕ್ ಶಾಲೆಗಳು) ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರ ನಡೆಸುವ ಶಾಲೆಗಳಿಗೆ ಸ್ಥಳಾಂತರಿಸುವ ಕುರಿತ ವಿವಾದದ ಬೆನ್ನಲ್ಲೇ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ವಿಚಾರ ನಡೆಸಿದೆ.
ಈ ಕುರಿತು ಮಾಹಿತಿ ನೀಡಿದ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಓಂ ಪ್ರಕಾಶ್ ರಾಜ್‌ಭರ್, ‘ಹೊಸದಾಗಿ ಸ್ಥಾಪಿಸುವ ಎರಡು ವಿಶ್ವವಿದ್ಯಾಲಯಗಳ ಜತೆಗೆ ಉತ್ತರ ಪ್ರದೇಶದ ಮದರಸಾ ಶಿಕ್ಷಣ ಮಂಡಳಿಯನ್ನು ಜೋಡಿಸಲಾಗುವುದು. ಈ ವಿ.ವಿಗಳಿಂದ ಎಲ್ಲ ಮದರಸಾಗಳು ಮಾನ್ಯತೆ ಪಡೆಯಬೇಕು. ಹೀಗಾದರೆ ಭವಿಷ್ಯದಲ್ಲಿ ಯಾವುದೇ ವಿವಾದಗಳು ಉಂಟಾಗದು’ ಎಂದು ಅವರು ತಿಳಿಸಿದರು.
ಲಖನೌ ಮತ್ತು ಇತರ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಕಾಲೇಜುಗಳು ಹೇಗೆ ಮಾನ್ಯತೆ ಪಡೆಯುತ್ತವೆಯೋ ಅದೇ ರೀತಿಯ ವ್ಯವಸ್ಥೆಯನ್ನು ಮದರಸಾಗಳಿಗೂ ತರಲಾಗುವುದು ಎಂದು ಅವರು ವಿವರಿಸಿದರು. ಪ್ರಸ್ತುತ ಮದರಾಸಗಳಿಗೆ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಮಾನ್ಯತೆ ನೀಡುತ್ತಿದೆ.
ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಯಾವುದೇ ಗಡುವನ್ನು ನೀಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ಈ ವಿವಾದವನ್ನು ಕೊನೆಗೊಳಿಸಲು ನಾವು ಬಯಸಿದ್ದೇವೆ. ಹಿಂದಿನ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಸರ್ಕಾರಗಳು ಈ ಬಗ್ಗೆ ಯೋಚಿಸಿಯೇ ಇರಲಿಲ್ಲ’ ಎಂದು ರಾಜ್‌ಭರ್ ಪ್ರತಿಕ್ರಿಯಿಸಿದ್ದಾರೆ.
‘ರಾಜ್ಯ ಸರ್ಕಾರವು ಈ ಸಂಬಂಧ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಸಂಬಂಧಿಸಿದ ಮಧ್ಯಸ್ಥಗಾರರ ಜತೆ ಮಾತುಕತೆ ನಡೆಸಬೇಕು. ಸರ್ಕಾರದ ನಿರ್ಧಾರದಿಂದ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು’ ಎಂದು ಇಸ್ಲಾಮಿಕ್ ವಿದ್ವಾಂಸರೊಬ್ಬರು ಹೇಳಿದ್ದಾರೆ.
ಮದರಸಾಗಳಲ್ಲಿ ಓದುತ್ತಿರುವ ಎಲ್ಲ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಹಾಗೂ ಮಾನ್ಯತೆ ಇಲ್ಲದ ಮದರಸಾಗಳಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ರಾಜ್ಯಕ್ಕೆ ಪತ್ರ ಬರೆದಿತ್ತು. ಅದರ ಬೆನ್ನಲ್ಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಯವರು, ಎನ್‌ಸಿಪಿಸಿಆರ್ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಮದರಸಾಗಳಲ್ಲಿನ ಮುಸ್ಲಿಮೇತರ ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಂತೆಯೂ ಪತ್ರದಲ್ಲಿ ಸೂಚಿಸಲಾಗಿದೆ.
ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 25,000 ಮದರಸಾಗಳಿವೆ. ಇವುಗಳಲ್ಲಿ 560 ಸರ್ಕಾರಿ ಅನುದಾನಿತ ಮದರಸಾಗಳು ಸೇರಿದಂತೆ ಒಟ್ಟು 16,500 ಮದರಸಾಗಳು ಸರ್ಕಾರದಿಂದ ಮಾನ್ಯತೆ ಪಡೆದಿವೆ. ಸುಮಾರು 8,500 ಮದರಸಾಗಳು ಉತ್ತರ ಪ್ರದೇಶದ ಮದರಸಾ ಶಿಕ್ಷಣ ಮಂಡಳಿಯ ಮಾನ್ಯತೆ ಪಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.