ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ನಮನ: ಹೃದಯದಿಂದ ಹಾಡುತ್ತಿದ್ದ ಉಸ್ತಾದ್‌ ರಾಶಿದ್‌ ಖಾನ್‌

ನುಡಿ ನಮನ
ಪಂ.ರವೀಂದ್ರ ಯಾವಗಲ್‌, ತಬಲಾ ವಾದಕರು
Published : 9 ಜನವರಿ 2024, 21:29 IST
Last Updated : 9 ಜನವರಿ 2024, 21:29 IST
ಫಾಲೋ ಮಾಡಿ
Comments

ವಿಶಿಷ್ಟ, ವಿಭಿನ್ನ ಗಾಯನ ಶಕ್ತಿಯ ಮೂಲಕ ವಿಶ್ವದ ಮನಗೆದ್ದಿದ್ದ ಉಸ್ತಾದ್‌ ರಾಶಿದ್‌ ಖಾನ್‌ ಅವರು 25–30ನೇ ವಯಸ್ಸಿಗೆಲ್ಲಾ ಅಸಾಧಾರಣ ಸಾಧನೆ ಮೆರೆದಿದ್ದರು. ರಾಮಪುರ– ಸಹಸ್ವಾನ್ ಘಾರಾಣೆಯನ್ನು ಬಲು ಎತ್ತರಕ್ಕೆ ಕೊಂಡೊಯ್ದಿದ್ದ ಅವರು ತಮ್ಮ ಮಧುರ ಧ್ವನಿಯಿಂದ ಕೋಟ್ಯಂತರ ಜನರ ಹೃದಯ ಗೆದ್ದಿದ್ದರು. ತಲೆಮಾರುಗಳ ಯುವಜನರಿಗೆ ಸ್ಫೂರ್ತಿಯಾಗಿದ್ದ ಅವರು ವೇದಿಕೆ ಹತ್ತಿದರೆಂದರೆ ಆ ಕಣ್ಣುಗಳ ಹೊಳಪು ರಸಿಕರ ಎದೆಯಲ್ಲಿ ಬೆಳಕು ಸೃಷ್ಟಿಸುತ್ತಿತ್ತು.

ಶಾಂತ ಸಾಗರದಂತಹ ಆಲಾಪ್‌, ಅತಿ ವೇಗದ ತಾನ್‌, ತುಮರಿಯ ಸೊಗಸು, ಮನಸೂರೆಗೊಳ್ಳುವ ಘಜಲ್‌ಗಳ ರಸಾನುಭವ ಸೃಷ್ಟಿಸುತ್ತಿದ್ದರು. ಗಾಯನದೊಳಗೆ ಕಿರಾಣಾ ಶೈಲಿ ಸೇರಿದಂತೆ ಹಲವು ಘರಾಣೆಗಳು ದರ್ಶನವಾಗುತ್ತಿದ್ದವು. ಬಹಳ ಸಣ್ಣ ವಯಸ್ಸಿನಲ್ಲೇ ಭೀಮಸೇನ ಜೋಶಿ ಅವರಿಂದ ‘ಮುಂದಿನ ತಲೆಮಾರಿನ ಭಾರತೀಯ ಸಂಗೀತದ ಭರವಸೆ’ ಎನಿಸಿಕೊಂಡಿದ್ದ ರಾಶಿದ್‌ ಖಾನ್‌ ಅದ್ಭುತ ಪ್ರತಿಭೆಯಾಗಿದ್ದರು.

ಉತ್ತರ ಪ್ರದೇಶದ ಸಹಸ್ವಾನ್‌ ಎಂಬ ಹಳ್ಳಿಯಲ್ಲಿ ತಾತ ಹಿನಾಯತ್‌ ಹುಸೇನ್‌ ಖಾನ್‌ ಹುಟ್ಟಹಾಕಿದ ಘರಾಣೆಯ ಅಡಿಪಾಯದ ಮೇಲೆ ರಾಶಿದ್‌ ಖಾನ್‌ ದೊಡ್ಡ ಗಾಯನ ಸೌಧವನ್ನೇ ನಿರ್ಮಾಣ ಮಾಡಿದರು. ಅವರ ಒಂದೇ ಒಂದು ಹಾಡು ಕೇಳಿದರೂ ಅದು ಬಹಳ ವರ್ಷಗಳ ಕಾಲ ನೆನಪಿನಲ್ಲಿ ಉಳಿಯುತ್ತಿತ್ತು, ಏಕೆಂದರೆ ಅವರು ಹೃದಯದಿಂದ ಹಾಡುತ್ತಿದ್ದರು.

ರಾಶಿದ್‌ ಖಾನ್‌ ಹೆಚ್ಚೆಚ್ಚು ಕಛೇರಿ ಮಾಡುವ ಮೊದಲೇ ಅವರು ಹಾಡಿದ ಕೆಸೆಟ್‌ಗಳು ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದವು. ಅತೀ ವೇಗವಾಗಿ ಸಾಧನೆ ಶಿಖರವೇರಿದರು, ಸಿನಿಮಾಗಳಲ್ಲೂ ಹಾಡಿ ಸೈ ಎನಿಸಿಕೊಂಡರು. ಅವರ ಗಾಯನ ಕೇಳಿಯೇ ಸಾಕಷ್ಟು ಯುವಜನರು ಸಂಗೀತ ಕ್ಷೇತ್ರವನ್ನು ಬದುಕಾಗಿಸಿಕೊಂಡರು ಎಂದರೂ ತಪ್ಪಲ್ಲ.

ತಾಯಿಯ ತಂದೆ ಉ.ನಿಸಾರ್‌ ಹುಸೇನ್‌ ಖಾನ್‌ ಅವರ ಬಳಿ ಸಂಗೀತ ಕಲಿಕೆ ಆರಂಭಿಸಿದ್ದ ಅವರು ಕೋಲ್ಕತ್ತಾದ ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಕಲಿಕೆ ಮುಂದು ವರಿಸಿದರು. ನಂತರ ಅಲ್ಲಿಯೇ ಗುರು ಸ್ಥಾನಕ್ಕೇರಿದರು. ಹೊರಗೆ ಹಾಡಲು ಅಕಾಡೆಮಿಯವರು ಅವಕಾಶ ನೀಡದಿದ್ದಾಗ ಭೀಮಸೇನ ಜೋಶಿ ಅವರು ಅಕಾಡೆಮಿಗೆ ಕರೆ ಮಾಡಿ ಪುಣೆಯ ಸವಾಯಿ ಗಂಧರ್ವ ಉತ್ಸವಕ್ಕೆ ಕರೆಸುತ್ತಿದ್ದರು. ಹಿಂದೊಮ್ಮೆ ನಡೆದ ಜೋಶಿ– ರಾಶಿದ್‌ ಒಂದು ಜುಗಲ್‌ಬಂದಿ ಈಗಲೂ ಜನರು ಹೃದಯಲ್ಲುಳಿದಿದೆ.

ಮೊದಲು ಅವರು ಅಕಾಡೆಮಿಯಲ್ಲಿ ನಡೆಯುತ್ತಿದ್ದ ಕಛೇರಿಗಳಲ್ಲಿ ತಂಬೂರ ನುಡಿಸುತ್ತಿದ್ದಂತೆ. ಈ ಬಗ್ಗೆ ಸಾಕಷ್ಟು ಕುತೂಹಲಗಳಿವೆ, ‘ತಂಬೂರಿ ಹಿಡಿದು ಅಮಾಯಕನ ರೀತಿಯಲ್ಲಿ ಹಿಂದೆ ಕುಳಿತಿರುವ ಆ ಹುಡುಗನನ್ನು ಮುಂದೆ ಕೂರಿಸಿದರೆ ಅದ್ಭುತವನ್ನೇ ಸೃಷ್ಟಿಸುತ್ತಾನೆ’ ಎಂದು ಹಲವರು ಹೇಳುತ್ತಿದ್ದ ಮಾತುಗಳನ್ನು ನಾನು ಕೇಳಿದ್ದೇನೆ.

ನನ್ನ ತಬಲಾ ಕೈಕೊಟ್ಟಾಗ...

ಕರ್ನಾಟಕದ ಜೊತೆಗೆ ಅವರಿಗೆ ಸಾಕಷ್ಟು ಒಡನಾಟವಿದ್ದೂ ಇಲ್ಲಿಯ ಕಲಾ
ವಿದರು ಅವರೊಂದಿಗೆ ಹೆಚ್ಚು ಹಾಡಿಲ್ಲ, ನುಡಿಸಿಲ್ಲ. ಆದರೆ ಅವರೊಂದಿಗೆ ತಬಲಾ ಸಾಥಿಯಾಗುವ ಒಂದು ಅವಕಾಶ 15 ವರ್ಷಗಳ ಹಿಂದೆ ನನಗೆ ದೊರಕಿತ್ತು. ಅಂದು ವಿಚಿತ್ರವೊಂದು ನಡೆಯಿತು, ನನ್ನ ದುರದೃಷ್ಟ ಅಂದು ನನ್ನ ತಬಲಾ ಕೈಕೊಟ್ಟಿತ್ತು. ನಾನು ಹಲವು ಬಾರಿ ಶ್ರುತಿ ಮಾಡಿಕೊಳ್ಳುತ್ತಿದ್ದ ಕಾರಣ ರಾಶಿದ್‌ ಖಾನ್‌ ಅವರಿಗೆ ಕಿರಿಕಿರಿಯಾಯಿತು. ಆ ಬೇಸರ ಅವರ ಮೊಗದಲ್ಲಿ ಕಾಣುತ್ತಿತ್ತು.

ಅದಾದ ನಂತರ ಅವರನ್ನು ಕಾಣಲು ನನಗೆ ಮುಜುಗರವಾಗುತ್ತಿತ್ತು, ಅವರ ಬಂದಾಗ ಭೇಟಿ ಮಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ. ಆದರೆ 2 ವರ್ಷದ ಕೆಳಗೆ ಪುಣೆಯಲ್ಲಿ ಅವರೇ ಗುರುತು ಹಿಡಿದು ನನ್ನನ್ನು ಮಾತನಾಡಿಸಿದರು, ಹಿಂದಿನ ಕಛೇರಿಯನ್ನು ನೆನಪಿಸಿದರು. ನನಗೆ ಆಶ್ಚರ್ಯ, ಅವರ ಅಗಾಧ ನೆನಪಿನ ಶಕ್ತಿಗೆ ಶರಣು ಶರಣಾರ್ಥಿ.

ಲೇಖಕ: ತಬಲಾ ವಾದಕ

ನಿರೂಪಣೆ: ಎಂ.ಎನ್‌.ಯೋಗೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT