ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಯ್ಡಾ ವಿಮಾನ ನಿಲ್ದಾಣ: ಭಾರತದ ಮೊದಲ ನೆಟ್‌ ಝೀರೊ ಎಮಿಷನ್‌ ವಲಯ!

Last Updated 25 ನವೆಂಬರ್ 2021, 12:27 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಅಲ್ಲಿನ ಹಲವು ಪ್ರಮುಖ ಯೋಜನೆಗಳು ಉದ್ಘಾಟನೆಯಾಗುತ್ತಿವೆ ಹಾಗೂ ಕಾರ್ಯಾರಂಭಿಸುತ್ತಿವೆ. ಇದೀಗ ಜೇವರ್‌ನಲ್ಲಿ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶವು ಐದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿರುವ ದೇಶದ ಏಕೈಕ ರಾಜ್ಯವಾಗಲಿದೆ.

ನಿರ್ಮಾಣವಾಗಲಿರುವ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕುರಿತು ತಿಳಿಯಬೇಕಾದ ಪ್ರಮುಖಾಂಶಗಳು ಇಲ್ಲಿವೆ:

* ಇದು ಭಾರತದ ಮೊದಲ ನೆಟ್‌ ಝೀರೊ ಎಮಿಷನ್‌ ವಿಮಾನ ನಿಲ್ದಾಣವಾಗಲಿದೆ. ಅಂದರೆ, ಇಲ್ಲಿನ ಹಸಿರು ಮನೆ ಅನಿಲ ಹೊರಸೂಸುವಿಕೆ ಮತ್ತು ವಾತಾವರಣದಿಂದ ಅದನ್ನು ನಿರ್ಮೂಲನ ಮಾಡುವಿಕೆ ಎರಡೂ ಸಮಾನ ಮಟ್ಟದಲ್ಲಿ ಇರುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಯೋಜನೆಗೆ ಉದ್ದೇಶಿಸಿರುವ ಸ್ಥಳದಲ್ಲಿನ ಮರಗಳನ್ನು ಬಳಸಿ ಫಾರೆಸ್ಟ್‌ ಪಾರ್ಕ್‌ ನಿರ್ಮಿಸಲಾಗುತ್ತದೆ. ಅದರಿಂದಾಗಿ ಸ್ಥಳೀಯ ಪ್ರಭೇದಗಳ ಸಂರಕ್ಷಣೆಯಾಗಲಿದೆ.

* ವಿಮಾನ ನಿಲ್ದಾಣದ ಮೊದಲ ಹಂತದ ಕಾಮಗಾರಿಗೆ ₹10,050 ಕೋಟಿ ನಿಗದಿಯಾಗಿದೆ. ಉತ್ತರ ಪ್ರದೇಶದಲ್ಲಿ ಹಲವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇತ್ತೀಚೆಗಷ್ಟೇ ಕುಶಿನಗರ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದೆ ಹಾಗೂ ಅಯೋಧ್ಯೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಹಂತದಲ್ಲಿದೆ.

* ಮೊದಲ ಹಂತದಲ್ಲಿ ನೊಯ್ಡಾ ವಿಮಾನ ನಿಲ್ದಾಣದವು 1,300 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದವರೆಗೂ ವಿಸ್ತರಿಸಲಿದೆ. ಅಲ್ಲಿ ವರ್ಷಕ್ಕೆ ಸುಮಾರು 1.2 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುವ ಸಾಮರ್ಥ್ಯ ಇರಲಿದೆ.

* ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಟಣೆಯ ಪ್ರಕಾರ, ದೆಹಲಿ, ನೊಯ್ಡಾ, ಗಾಜಿಯಾಬಾದ್‌, ಅಲೀಗಡ, ಆಗ್ರಾ, ಫರೀದಾಬಾದ್‌ ಮತ್ತು ಸುತ್ತಲಿನ ಪ್ರದೇಶಗಳ ಜನರಿಗೆ ಈ ವಿಮಾನ ನಿಲ್ದಾಣದಿಂದ ಅನುಕೂಲ ಆಗಲಿದೆ. ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೊಯ್ಡಾ ವಿಮಾನ ನಿಲ್ದಾಣವು ಸುಮಾರು 70 ಕಿ.ಮೀ ದೂರದಲ್ಲಿದೆ. ಇದು ರಾಷ್ಟ್ರೀಯ ರಾಜಧಾನಿ ವಲಯದಲ್ಲಿನ ಎರಡನೇ ವಿಮಾನ ನಿಲ್ದಾಣವಾಗಲಿದೆ.

* 2024ರ ವೇಳೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ. ಜೂರಿಕ್‌ ಏರ್‌ಪೋರ್ಟ್‌ ಇಂಟರ್‌ನ್ಯಾಷನಲ್‌ ಎಜಿ ಯೋಜನೆಯ ಹೊಣೆ ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT