ಗೋಪೇಶ್ವರ: ಉತ್ತರಾಖಂಡದಲ್ಲಿ ಸುರಿದ ಭಾರಿ ಮಳೆಗೆ ಹಲವೆಡೆ ಭೂಕುಸಿತ ಸಂಭವಿಸಿದ್ದು, ಬದರಿನಾಥ ಹಾಗೂ ಕೇದಾರನಾಥ ಹೆದ್ದಾರಿ ಭಾಗಶಃ ಬಂದ್ ಆಗಿದೆ ಎಂದು ವರದಿಯಾಗಿದೆ.
ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ರಸ್ತೆಗಳಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯ ಜಾರಿಯಲ್ಲಿದೆ. ಇದರಿಂದಾಗಿ ಎರಡನೇ ದಿನವೂ ಬದರಿನಾಥ ರಾಷ್ಟ್ರೀಯ ಹೆದ್ದಾರಿಯ ಚಮೋಲಿ ಹಾಗೂ ನಂದಪ್ರಯಾಗದ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ರುದ್ರಪ್ರಯಾಗ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೇಪಾಳದ ನಾಲ್ವರು ಮೃತಪಟ್ಟಿದ್ದಾರೆ. ಹರಿದ್ವಾರ ಜಿಲ್ಲೆಯಲ್ಲಿ ಗಂಗಾ ನದಿ ಪ್ರವಾಹದಲ್ಲಿ ಓರ್ವ ಕೊಚ್ಚಿ ಹೋಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಭೂಕುಸಿತದಿಂದಾಗಿ ಕೇದಾರನಾಥ ಹಾಗೂ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿವೆ.
ಕೇದಾರನಾಥ ಯಾತ್ರೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ ಎಂದು ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.