ಉತ್ತರಕಾಶಿ: ಉತ್ತರಾ ಖಂಡದ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊರೆಯಲಾಗಿರುವ ಸುರಂಗ ಕುಸಿದು ಒಳಗೆ ಸಿಲುಕಿರುವ 40 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ 7ನೇ ದಿನವಾದ ಶನಿವಾರವೂ ಮುಂದುವರೆದಿದೆ.
ಇಂದು ಬೆಳಗ್ಗೆಯಿಂದ ರಂಧ್ರ ಕೊರೆಯುವ ಕೆಲಸವನ್ನು ನಿಲ್ಲಿಸಲಾಗಿದೆ. ಅಲ್ಲಿ ಬಿರುಕು ಉಂಟಾಗಿರುವುದರಿಂದ ಕೆಲಸ ನಿಲ್ಲಿಸಲಾಗಿದೆ. ಯಂತ್ರದಲ್ಲಿ ಯಾವುದೇ ದೋಷ ಇಲ್ಲ ಎಂದು ಎನ್‌ಎಚ್‌ಐಡಿಸಿಎಲ್ ಕಂಪನಿ ನಿರ್ದೇಶಕ ಅಂಶು ಮನೀಶ್ ಹೇಳಿದ್ದಾರೆ.
‘ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತರುವುದಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕುಸಿದಿರುವ ಸುರಂಗದ ಅವಶೇಷಗಳ ಮೂಲಕ ಈ ವರೆಗೆ 25 ಮೀಟರ್ ಉದ್ದಕ್ಕೆ ಪೈಪ್‌ಗಳನ್ನು ಅಳವಡಿಸಲಾಗಿದೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಇನ್ನೊಂದೆಡೆ, ‘ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದರೆ, ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾಗಿ ಮೂಲಗಳು ಹೇಳಿವೆ. ಆದಾಗ್ಯೂ ಕಾರ್ಮಿಕರ ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.