ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕಾಶಿ ಸುರಂಗ ಕುಸಿತ: ಅಂತಿಮ ಹಂತಕ್ಕೆ ರಕ್ಷಣಾ ಕಾರ್ಯ

Published 22 ನವೆಂಬರ್ 2023, 12:56 IST
Last Updated 22 ನವೆಂಬರ್ 2023, 12:56 IST
ಅಕ್ಷರ ಗಾತ್ರ

ಉತ್ತರಕಾಶಿ (ಉತ್ತರಾಖಂಡ): ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮಹತ್ವದ ಘಟ್ಟ ತಲುಪಿದೆ. ಇನ್ನು 12 ಮೀಟರ್‌ನಷ್ಟು ಕೊರೆದರೆ ಕಾರ್ಮಿಕರನ್ನು ತಲುಪಬಹುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 

ಕಾರ್ಮಿಕರ ರಕ್ಷಣೆಗಾಗಿ ಹಗಲು–ರಾತ್ರಿ ವಿವಿಧ ಆಯಾಮಗಳಿಂದ ನಡೆಯುತ್ತಿರುವ ಕಾರ್ಯಾಚರಣೆ 11ನೇ ದಿನ ಪ್ರವೇಶಿಸಿದೆ. ಯಾವುದೇ ಅಡೆತಡೆಯಿಲ್ಲದೆ ಕಾರ್ಯಾಚರಣೆ ಸಾಗಿದರೆ ಬುಧವಾರ ತಡರಾತ್ರಿ ಅಥವಾ ಗುರುವಾರ ಬೆಳಿಗ್ಗೆ ಕಾರ್ಮಿಕರು ಸುರಂಗದಿಂದ ಹೊರ ಬರುವ ನಿರೀಕ್ಷೆ ಇದೆ. 

ರಕ್ಷಣೆಗಾಗಿ ಸುರಂಗ ಕೊರೆಯುವುದು ಪೂರ್ಣಗೊಂಡ ನಂತರ, ಕಾರ್ಮಿಕರು 800 ಮಿಲಿ ಮೀಟರ್‌ ವ್ಯಾಸದ ಸ್ಟೀಲ್ ಪೈಪ್‌ಗಳ ಮೂಲಕ ತೆವಳಿಕೊಂಡು ಹೊರ ಬರಬೇಕಾಗುತ್ತದೆ.

ಘಟನಾ ಸ್ಥಳದಲ್ಲಿ 15 ವೈದ್ಯರ ತಂಡ ನಿಯೋಜಿಸಲಾಗಿದೆ. ನಿಯಂತ್ರಣ ಕೊಠಡಿಯಲ್ಲಿ ಎಂಟು ಹಾಸಿಗೆಗಳ ಆಸ್ಪತ್ರೆ ಸಿದ್ಧಪಡಿಸಲಾಗಿದೆ. ಹಲವಾರು ಆಂಬುಲೆನ್ಸ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಚಿನ್ಯಾಲಿಸೌರ್ನ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಆಸ್ಪತ್ರೆ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಪರ್ಯಾಯ ಯೋಜನೆ ರೂಪಿಸಿರುವ ರಕ್ಷಣಾ ಸಿಬ್ಬಂದಿ, ಉತ್ತರಾಖಂಡ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಇನ್ನೊಂದು ತುದಿಯಿಂದ ಸುಮಾರು ಎಂಟು ಮೀಟರ್‌ ಅಗೆದಿದ್ದರು. 

800 ಮಿಲಿ ಮೀಟರ್ ವ್ಯಾಸದ ಉಕ್ಕಿನ ಪೈಪ್‌ಅನ್ನು ಕುಸಿದುಬಿದ್ದಿರುವ ಕಲ್ಲುಮಣ್ಣಿನ ಮೂಲಕ 45 ಮೀಟರ್‌ವರೆಗೆ ಅಳವಡಿಸಲಾಗಿದೆ. ಇನ್ನು 12 ಮೀಟರ್‌ನಷ್ಟು ಕೊರೆದರೆ ರಕ್ಷಣಾ ಸಿಬ್ಬಂದಿಗೆ ಕಾರ್ಮಿಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಲ್ಕ್ಯಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಎನ್‌ಎಚ್‌ಐಡಿಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಮಹಮೂದ್ ಅಹಮದ್, ‘ರಕ್ಷಣಾ ಕಾರ್ಯ ಮಹತ್ವದ ಘಟ್ಟ ತಲುಪಿದ್ದು, ಯಾವುದೇ ಅಡೆತಡೆ ಎದುರಾಗದಿದ್ದರೆ ಮತ್ತು ಇದೇ ವೇಗದಲ್ಲಿ ಸಾಗಿದರೆ ಶೀಘ್ರ ಒಳ್ಳೆಯ ಸುದ್ದಿ ಸಿಗಬಹುದು’ ಎಂದು ಹೇಳಿದರು. 

ಪರ್ಯಾಯ ಯೋಜನೆ ಬಗ್ಗೆ ಮಾತನಾಡಿದ ಅಹಮದ್, ‘ಬಾರ್ಕೋಟ್ ಕಡೆಯಿಂದ ಅಡ್ಡವಾಗಿ ಸುರಂಗ ಕೊರೆಯುವ ಕೆಲಸ ಮಾಡುತ್ತಿದ್ದೇವೆ. ಮೂರು ಸ್ಫೋಟ ನಡೆಸಲಾಗಿದೆ ಮತ್ತು ಈಗಾಗಲೇ ಆ ತುದಿಯಿಂದ ಎಂಟು ಮೀಟರ್ ಪ್ರವೇಶಿಸಿದ್ದೇವೆ’ ಎಂದರು. ಆದರೆ ಈ ಕಡೆಯಿಂದ ಸುರಂಗ ಕೊರೆದು, ಕಾರ್ಮಿಕರ ಬಳಿ ಹೋಗಲು ಹೆಚ್ಚು ಸಮಯ ಬೇಕು ಎಂದರು.

‘ಕಾರ್ಮಿಕರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ರವಾನಿಸಲು ಸೋಮವಾರ ಅಳವಡಿಸಿರುವ ಆರು ಇಂಚು ವ್ಯಾಸದ ಪೈಪ್ ಲೈನ್ 57 ಮೀಟರ್ ಉದ್ದವಾಗಿದೆ’ ಎಂದು ಅಹಮದ್ ಹೇಳಿದರು. 

ರಕ್ಷಣಾ ಕಾರ್ಯಾಚರಣೆ ನೋಡಲ್ ಅಧಿಕಾರಿ ನೀರಜ್ ಖೈರ್ವಾಲ್, ‘ಆಹಾರ ಪೈಪ್‌ ಬಳಸಿ ಅವರೊಂದಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಆಡಿಯೊ ಸಂವಹನ ಸ್ಥಾಪಿಸಿವೆ’ ಎಂದು ಹೇಳಿದರು.

‘ಒಂದು ತಂತಿ, ಒಂದು ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಕಾರ್ಮಿಕರು ಇರುವಲ್ಲಿಗೆ ಕಳುಹಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕಾರ್ಮಿಕರು ಸೀಮಿತ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿರುವುದರಿಂದ ಮಲಬದ್ಧತೆ ಆಗಿದೆ ಎಂದು ಹೇಳಿದ್ದಾರೆ. ಅಗತ್ಯ ಔಷಧಿಗಳನ್ನು ಅವರಿಗೆ ಕಳುಹಿಸಲಾಗಿದೆ. ವೈದ್ಯರು ಅವರೊಂದಿಗೆ ಮಾತನಾಡಿದ್ದಾರೆ’ ಎಂದು ಖೈರ್ವಾಲ್ ಹೇಳಿದರು.

ಈ ರೀತಿಯ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಸಹ ಎದುರಾಗಬಹುದು. ಮನೋವೈದ್ಯರು ಸಹ ಅವರೊಂದಿಗೆ ಮಾತನಾಡುತ್ತಾರೆ ಎಂದರು. ಕಾರ್ಮಿಕರಿಗೆ ಟವೆಲ್ ಮತ್ತು ಒಳ ಉಡುಪುಗಳಂತಹ ಇತರ ಅಗತ್ಯ ವಸ್ತುಗಳನ್ನು ಸಹ ಪೂರೈಸಲಾಗಿದೆ. 

ಇದಕ್ಕೂ ಮುನ್ನ ಸಿಲ್ಕ್ಯಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿಎಂಒ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ, ‘ಈಗ 45 ಮೀಟರ್ ವರೆಗೆ ಪೈಪ್‌ಗಳನ್ನು ಅಳವಡಿಸಲಾಗಿದೆ. ಕಾರ್ಮಿಕರೊಂದಿಗೆ ಮಾತನಾಡಿದ್ದೇನೆ. ಅವರ ನೈತಿಕಸ್ಥೈರ್ಯ ಹೆಚ್ಚಾಗಿದೆ’ ಎಂದರು. 

ಕಾರ್ಮಿಕರ ಸ್ಥಳಾಂತರಿಸುವ ಸಮಯದ ಬಗ್ಗೆ ಕೇಳಿದಾಗ, ‘ನಾವು ಅವರೊಂದಿಗೆ ಬಗ್ವಾಲ್ ಆಚರಿಸುವ ವಿಶ್ವಾಸ ಹೊಂದಿದ್ದೇವೆ’ ಎಂದು ಅವರು ಹೇಳಿದರು. ‌ದೀಪಾವಳಿ ಬಳಿಕ ಗರ್ವಾಲ್ ಪ್ರದೇಶದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT