ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಜಾಫರ್ ಆಘಾ (70) ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಅವರಿಗೆ ಪುತ್ರ ಇದ್ದಾರೆ. 1979ರಲ್ಲಿ ಲಿಂಕ್ ನಿಯತಕಾಲಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿ ಬದುಕನ್ನು ಆಘಾ ಆರಂಭಿಸಿದರು.
‘ಜಾಫರ್ ಆಘಾ ಅವರ ನಿಧನ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ಹಿರಿಯ ಪತ್ರಕರ್ತ, ಅಂಕಣಕಾರರಾಗಿ ಜಾಗತಿಕ ಮಟ್ಟದ ಪತ್ರಿಕೋದ್ಯಮದಲ್ಲೇ ಗುರುತಿಸಿಕೊಂಡವರು ಅವರು. ನಮ್ಮ ರಾಷ್ಟ್ರದ ಮೌಲ್ಯಗಳಿಗೆ ದೃಢವಾಗಿ ನಿಂತಿದ್ದ ಆಘಾ, ಸ್ನೇಹಿತನಾಗಿ, ತತ್ವಜ್ಞಾನಿಯಾಗಿ, ಮಾರ್ಗದರ್ಶಕರಾಗಿ ಹಲವರಿಗೆ ಸ್ಫೂರ್ತಿಯಾಗಿದ್ದರು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
ಅಲಹಾಬಾದ್ ವಿಶ್ವವಿದ್ಯಾಲಯದ ಯಾದ್‌ಗಾರ್ ಹಸೈನಿ ಅಂತರ ಕಾಲೇಜಿನಲ್ಲಿ ಅವರು ವ್ಯಾಸಂಗ ಮಾಡಿದ್ದರು. ತಮ್ಮ 45 ವರ್ಷಗಳ ವೃತ್ತಿ ಬದುಕಿನಲ್ಲಿ ಆಘಾ ಅವರು ದಿ ಪೇಟ್ರಿಯಾಟ್, ಬ್ಯುಸಿನೆಸ್ ಅಂಡ್ ಪೊಲಿಟಿಕಲ್ ಅಬ್ಸರ್ವರ್, ಇಂಡಿಯಾ ಟುಡೆ, ಈಟಿವಿ, ಇನ್‌ಕಿಲಾಬ್ ಡೈಲಿ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿ ಬದುಕಿನ ಕೊನೆಯ ಹಂತದಲ್ಲಿ ಅವರು ನ್ಯಾಷನಲ್ ಹೆರಾಲ್ಡ್ ಸಮೂಹ ಸೇರಿದರು. ಖ್ವಾಮಿ ಆವಾಜ್ ಉರ್ದು ಪತ್ರಿಕೆಯ ಮೊದಲ ಸಂಪಾದಕರಾಗಿದ್ದರು.
ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಹೌಜ್ ರಾಣಿ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.