ನವದೆಹಲಿ: ನಿಯಮಾವಳಿಗಳನ್ನು ಪಾಲಿಸದ ಕಾರಣಕ್ಕೆ ಬೆಂಗಳೂರು ಮೂಲದ ಅನಾಥಾಶ್ರಮ ದಾರುಲ್ ಉಲೂಮ್ ಸಯಿದಿಯಾ ಯತೀಂಖಾನಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚಿಸಿದೆ.
‘ಬಾಲನ್ಯಾಯ ಕಾಯ್ದೆಯಡಿ ಈ ಅನಾಥಾಶ್ರಮ ನೋಂದಣಿಯಾಗಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಮತ್ತು ಮೂಲಸೌಕರ್ಯಗಳನ್ನು ಹೊಂದಿಲ್ಲ’ ಎಂದು ಆಯೋಗ ತಿಳಿಸಿದೆ.
‘ಕಾನೂನುಬಾಹಿರವಾಗಿ ನಡೆಸುತ್ತಿರುವ ಅನಾಥಾಶ್ರಮಕ್ಕೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿ ಮಕ್ಕಳು ಮಧ್ಯಕಾಲೀನ ತಾಲಿಬಾನ್ ಜೀವನ ನಡೆಸುತ್ತಿದ್ದಾರೆ’ ಎಂದು ಆಯೋಗದ ಮುಖ್ಯಸ್ಥ ಪ್ರಿಯಾಂಕ್ ಕನುಂಗೊ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸುಮಾರು 200 ಅನಾಥ ಮಕ್ಕಳು ಇಲ್ಲಿದ್ದಾರೆ. 100 ಚದರ ಅಡಿ ಕೋಣೆಯಲ್ಲಿ 8 ಮಕ್ಕಳನ್ನು ಇರಿಸಲಾಗಿದೆ. ಅಂತಹ 5 ಕೊಠಡಿಗಳಲ್ಲಿ 40 ಮಕ್ಕಳು ವಾಸಿಸುತ್ತಿದ್ದಾರೆ ಮತ್ತು 16 ಮಕ್ಕಳು ಕಾರಿಡಾರ್‌ನಲ್ಲಿ ವಾಸಿಸುತ್ತಿದ್ದಾರೆ. ಉಳಿದ 150 ಮಕ್ಕಳು ಹಾಲ್‌ಗಳಲ್ಲಿ ಮಲಗುತ್ತಾರೆ. ಮಕ್ಕಳು ಮದ್ರಸಾದಲ್ಲಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಯಾವುದೇ ಮಗುವನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.