ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಶೇ 99.12ರಷ್ಟು ಮತದಾನ, ಜುಲೈ 21ರಂದು ಫಲಿತಾಂಶ

Last Updated 19 ಜುಲೈ 2022, 5:10 IST
ಅಕ್ಷರ ಗಾತ್ರ

ನವದೆಹಲಿ: ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ಸೋಮವಾರ ರಾಷ್ಟ್ರ ರಾಜಧಾನಿ ಮತ್ತು ವಿವಿಧ ರಾಜ್ಯಗಳಲ್ಲಿ ಸೌಹಾರ್ದದಿಂದ ಚುನಾವಣೆ ನಡೆದಿದ್ದು, ಶೇ 99.12ರಷ್ಟು ಮತದಾನವಾಗಿದೆ. ಮತಎಣಿಕೆ ಇದೇ 21ರಂದು ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

ಕರ್ನಾಟಕ ಸೇರಿದಂತೆ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿಶೇ 100ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, 771 ಸಂಸದರು, 4,025 ಶಾಸಕರು ಈ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಸುಮಾರು 44 ಸಂಸದರು ತಾವು ಪ್ರತಿನಿಧಿಸುವ ರಾಜ್ಯಗಳಲ್ಲಿ ಹಕ್ಕು ಚಲಾಯಿಸಲು ಅನುಮತಿ ಪಡೆದಿದ್ದರು.

ಸಂಸದರು, ಶಾಸಕರು ಸೇರಿದಂತೆ ಸುಮಾರು 4,800 ಮಂದಿಗೆ ಮತದಾನದ ಹಕ್ಕು ಇತ್ತು. ಸಂಸತ್ತಿನ ನಾಮಕರಣ ಸದಸ್ಯರು ಹಾಗೂ ವಿವಿಧ ರಾಜ್ಯಗಳ ವಿಧಾನ ಪರಿಷತ್ತಿನ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ.

ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ. ಎನ್‌ಡಿಎ ಅಭ್ಯರ್ಥಿಗೆ ಪ್ರಾದೇಶಿಕ ಪಕ್ಷಗಳಾದ ಬಿಜು ಜನತಾ ದಳ, ಬಹುಜನ ಸಮಾಜ ಪಕ್ಷ, ಶಿರೋಮಣಿ ಅಕಾಲಿ ದಳ, ಶಿವಸೇನಾ, ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡಾ ಬೆಂಬಲಿಸಿವೆ.

ನವದೆಹಲಿಗೆ ಮತಪೆಟ್ಟಿಗೆಗಳು: ಸಂಸತ್ತು ಹಾಗೂ ಶಾಸಕರು ಹಕ್ಕು ಚಲಾಯಿಸಲು ಆಯಾ ರಾಜ್ಯಗಳ ವಿಧಾನಸಭೆಗಳಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಈ ಮತಪೆಟ್ಟಿಗೆಗಳು ಸೋಮವಾರವೇ ರಸ್ತೆ ಅಥವಾ ವಿಮಾನದ ಮೂಲಕ ನವದೆಹಲಿಗೆ ತಲುಪಿವೆ.

ಸಂಸತ್‌ ಭವನದ ಮತಗಟ್ಟೆಗಗಳಲ್ಲಿ ಶೇ 98.9 ಮತದಾನವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂದಿ, ರಾಹುಲ್‌ ಗಾಂಧಿ ಸೇರಿ ಹಲವು ವಿವಿಧ ಪಕ್ಷಗಳ ನಾಯಕರು ಅವರು ಇಲ್ಲಿ ಹಕ್ಕು ಚಲಾಯಿಸಿದರು.

ಸಂಸತ್ತು ಮತಗಟ್ಟೆಯ ಚುನಾವಣಾದಿಕಾರಿ ಪಿ.ಸಿ.ಮೋದಿ ಪ್ರಕಾರ, ಇಲ್ಲಿ ಹಕ್ಕು ಚಲಾಯಿಸಲು 727 ಸಂಸದರು, 9 ಶಾಸಕರಿಗೆ ಚುನಾವಣಾ ಆಯೋಗ ಅನುಮೋದನೆ ನೀಡಿತ್ತು. ಈ ಪೈಕಿ ಕ್ರಮವಾಗಿ 719 ಸಂಸದರು, 9 ಶಾಸಕರು ಹಕ್ಕು ಚಲಾಯಿಸಿದ್ದಾರೆ.

ರಾಜ್ಯದಲ್ಲಿ ಸಂಪೂರ್ಣ ಮತದಾನ
ನೂತನ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ರಾಜ್ಯದ ಎಲ್ಲ ಶಾಸಕರೂ ಮತ ಚಲಾಯಿಸಿದರು. ಸಂಸದರಾದ ವಿ. ಶ್ರೀನಿವಾಸ ಪ್ರಸಾದ್‌, ಎಚ್‌.ಡಿ. ದೇವೇಗೌಡ ಕೂಡ ಬೆಂಗಳೂರಿನಲ್ಲಿಯೇ ಹಕ್ಕು ಚಲಾಯಿಸಿದ್ದು, ಒಟ್ಟು 226 ಮತಗಳ ಚಲಾವಣೆಯಾಗಿದೆ.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮೊದಲಿಗರಾಗಿ ಮತ ಚಲಾವಣೆ ಮಾಡಿದರು. ಬಳಿಕ ಉಳಿದ ಶಾಸಕರು ಸರದಿಯೋಪಾದಿಯಲ್ಲಿ ಬಂದು ಮತ ಚಲಾಯಿಸಿದರು. ನಿಗದಿತ ಅವಧಿಗೂ ಮೊದಲೇ ಎಲ್ಲರೂ ಮತದಾನ ಮಾಡಿದರು. ರಾತ್ರಿ 9.20ಕ್ಕೆ ವಿಮಾನದ ಮೂಲಕ ಮತಪೆಟ್ಟಿಗೆಯನ್ನು ದೆಹಲಿಗೆ ಕೊಂಡೊಯ್ಯಲಾಯಿತು.

___

* ಮಾಜಿ ಪ್ರಧಾನಿ, ರಾಜ್ಯಸಭೆ ಸದಸ್ಯರೂ ಆದ ಎಚ್.ಡಿ.ದೇವೇಗೌಡ ಬೆಂಗಳೂರಿನಲ್ಲಿ, ಮನಮೋಹನ್‌ ಸಿಂಗ್‌ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಮುಲಯಂ ಸಿಂಗ್‌ ಯಾದವ್ ಅವರು ದೆಹಲಿಯಲ್ಲಿ ವೀಲ್‌ಚೇರ್‌ನಲ್ಲಿ ಬಂದು ಹಕ್ಕು ಚಲಾಯಿಸಿದರು.

* ಕೋವಿಡೋತ್ತರ ಚಿಕಿತ್ಸೆ ಪಡೆಯುತ್ತಿರುವ ಒಡಿಶಾ ವಿರೋಧಪಕ್ಷದ ನಾಯಕ, ಬಿಜೆಪಿಯ ಪ್ರದಿಪ್ತಾ ಕುಮಾರ್‌ ನಾಯಕ್‌ ಆಸ್ಪತ್ರೆಯಿಂದ ಆಕ್ಸಿಜನ್‌ ಸಿಲಿಂಡರ್ ನೆರವಿನಲ್ಲೇ ಬಂದು ಹಕ್ಕು ಚಲಾಯಿಸಿದರು. ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಎಂಎಲ್‌ಎ ಮಿತಿಲೇಶ್‌ ಕುಮಾರ್ ಅವರನ್ನು ಪಾಟ್ನಾದಲ್ಲಿ ಸ್ಟ್ರೆಚರ್‌ನಲ್ಲಿ ಮತಗಟ್ಟೆಗೆ ಕರೆತರಲಾಯಿತು

* ಚಂಡೀಗಡ: ಹರಿಯಾಣ ಕಾಂಗ್ರೆಸ್‌ ಶಾಸಕ ಕುಲದೀಪ್‌ ಬಿಷ್ಣೋಯ್ ಅವರು ‘ನನ್ನ ಆತ್ಮಸಾಕ್ಷಿ’ಗೆ ಅನುಗುಣವಾಗಿ ಮತ ಚಲಾಯಿಸಿದ್ದೇನೆ ಎಂದು ಹೇಳಿದರು. ಕಳೆದ ತಿಂಗಳು ರಾಜ್ಯಸಭೆ ಚುನಾವಣೆಯಲ್ಲಿಯೂ ಅವರು ಅಡ್ಡಮತದಾನ ಮಾಡಿದ್ದರು. ಜಾರ್ಖಂಡ್‌ನಲ್ಲಿ ಎನ್‌ಸಿಪಿ ಎಂಎಲ್‌ಎ ಕೂಡಾ ಆತ್ಮಸಾಕ್ಷಿ ಮತ ನೀಡಿದ್ದೇನೆ ಎಂದು ನಂತರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT