ಹೈದರಾಬಾದ್: ‘ದೇಹದ ಎಡಭಾಗವು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದರೂ, ಒಂಬತ್ತು ತಿಂಗಳ ನನ್ನನ್ನು ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ನಾಗಪುರ ಜೈಲಿನಲ್ಲಿದ್ದ ವೇಳೆ ನೋವು ನಿವಾರಕ ಮಾತ್ರೆಗಳನ್ನಷ್ಟೇ ನೀಡುತ್ತಿದ್ದರು...
– ಮಾವೋವಾದಿಗಳ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಜೈಲುಪಾಲಾಗಿ ನಂತರ ಪ್ರಕರಣದಿಂದ ಖುಲಾಸೆಗೊಂಡ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಸ್ಪಷ್ಟ ನುಡಿಗಳು. ಜೈಲಿನಲ್ಲಿ ಕಳೆದ ದಿನಗಳನ್ನು ಇಲ್ಲಿನ ತಮ್ಮ ನಿವಾಸದಲ್ಲಿ ಪತ್ರಕರ್ತರ ಜತೆ ಹಂಚಿಕೊಂಡಿದ್ದಾರೆ.
ಬಂಧನ– ಬೆದರಿಕೆ: ‘ದೆಹಲಿಯಲ್ಲಿದ್ದ ನನ್ನನ್ನು ‘ಅಪಹರಿಸಿದ’ ಬಳಿಕ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಇದಕ್ಕೂ ಮುನ್ನ ಅಲ್ಲಿನ ಪೊಲೀಸರು ಹಾಗೂ ತನಿಖಾಧಿಕಾರಿಗಳು ಮನೆಗೆ ತೆರಳಿ ನನ್ನ ಕುಟುಂಬದ ಸದಸ್ಯರಿಗೆ ಬೆದರಿಕೆ ಒಡ್ಡಿದ್ದರು’ ಎಂದ ಪ್ರೊ.ಸಾಯಿಬಾಬಾ, ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು.
‘ಪೋಲಿಯೊದಿಂದ ನನಗೆ ನಡೆಯಲು ಸಾಧ್ಯವಿಲ್ಲ. ಗಾಲಿ ಕುರ್ಚಿಯಲ್ಲಿದ್ದ ನನ್ನನ್ನು ಎಳೆದೊಯ್ದಿದ್ದರಿಂದ ನನ್ನ ಎಡಗೈಗೆ ತೀವ್ರವಾಗಿ ಗಾಯ ಉಂಟಾಗಿ, ನರವ್ಯೂಹದ ಮೇಲೂ ತೀವ್ರ ಪರಿಣಾಮ ಬೀರಿತು. ದೇಹದ ಎಡಭಾಗ ಸಂಪೂರ್ಣವಾಗಿ ನಿಷ್ಕ್ರಿಯಗೊಂಡರೂ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಯಾವ ವೈದ್ಯರೂ ಭೇಟಿಯಾಗಲಿಲ್ಲ’ ಎಂದು ‘ಆ ದಿನಗಳ’ನ್ನು ನೆನಪಿಸಿಕೊಂಡರು.
‘ಜೈಲಿನೊಳಗೆ ಯಾವುದೇ ದೈಹಿಕ ಕಿರುಕುಳ ನೀಡಲಿಲ್ಲ, ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರು’ ಎಂದರು.
‘ನನ್ನನ್ನು ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಲಿಲ್ಲ. ನಾನು ಸ್ವಯಂಪ್ರೇರಿತನಾಗಿ ಅವರ ವಶದಲ್ಲಿರಲು ಸಿದ್ಧನಿದ್ದೆ. ಈ ಬಗ್ಗೆ ತನಿಖಾಧಿಕಾರಿಗಳನ್ನೂ ಪ್ರಶ್ನಿಸಿದ್ದೆ. ನೀವು ಯಾವುದೇ ಅಪರಾಧ ಮಾಡದ ಕಾರಣ, ಅದರ ಅಗತ್ಯವಿಲ್ಲ ಎಂದು ತಿಳಿಸಿದ್ದರು’ ಎಂದು ವಿವರಿಸಿದರು.
2014ರ ಮೇ ತಿಂಗಳಲ್ಲಿ ಪ್ರೊ. ಸಾಯಿಬಾಬಾ ಅವರನ್ನು ಮಹಾರಾಷ್ಟ್ರ ಪೊಲೀಸರು ದೆಹಲಿಯಲ್ಲಿ ಬಂಧಿಸಿ, ಮಹಾರಾಷ್ಟ್ರದ ಗಡ್‌ಚಿರೋಲಿಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ನಂತರ ನಾಗಪುರ ಜೈಲಿನ ಮೊಟ್ಟೆ ಆಕಾರದ ಸೆಲ್‌ನಲ್ಲಿಟ್ಟಿದ್ದರು.
ಪ್ರೊ. ಸಾಯಿಬಾಬಾ ವಿರುದ್ಧ ಸಮಂಜಸವಾದ ಸಾಕ್ಷಿ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದ ಬಾಂಬೆ ಹೈಕೋರ್ಟ್, ಈ ವರ್ಷದ ಮಾರ್ಚ್ ತಿಂಗಳಲ್ಲಿಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ, ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು.
ಮುರಿದುಹೋದ ಗಾಲಿಕುರ್ಚಿಯಲ್ಲೇ ಬಂಧನದ ಬಳಿಕ ನಾಗಪುರದ ಜೈಲಿಗೆ ಕಳುಹಿಸಿದರು. ಜೈಲಿನಲ್ಲೂ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿಲ್ಲ.
-ಜಿ.ಎನ್. ಸಾಯಿಬಾಬಾ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ