ತಿರುವನಂತಪುರ: ಕೇರಳದ ಮುಲ್ಲಪೆರಿಯಾರ್ ಬಳಿ ಇರುವ 130 ವರ್ಷ ಹಳೆಯ ಅಣೆಕಟ್ಟೆಯ ಬಳಕೆಯನ್ನು ನಿಲ್ಲಿಸಿ, ಹೊಸದಾಗಿ ಅಣೆಕಟ್ಟೆಯನ್ನು ನಿರ್ಮಿಸಬೇಕು ಎಂಬ ಬೇಡಿಕೆ, ದುರಂತದ ಹಿನ್ನೆಲೆಯಲ್ಲಿ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.
ಎಲ್‌ಡಿಎಫ್ ಹಾಗೂ ಯುಡಿಎಫ್ ಪಕ್ಷಗಳ ಸಂಸದರು ಈ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಯುಡಿಎಫ್ ಸಂಸದರೊಬ್ಬರು ಲೋಕಸಭೆಯಲ್ಲೂ ಪ್ರಸ್ತಾಪಿಸಿದ್ದಾರೆ. ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ ಅವರನ್ನು ಭೇಟಿಯಾಗಿ ಬೇಡಿಕೆ ಪ್ರಸ್ತಾಪಿಸಿದ್ದಾರೆ.
ವಯನಾಡ್ ದುರಂತದ ಬಳಿಕ ಮತ್ತೊಂದು ದುರಂತವನ್ನು ತಡೆದುಕೊಳ್ಳುವ ಶಕ್ತಿ ರಾಜ್ಯಕ್ಕಿಲ್ಲ ಎನ್ನುವುದನ್ನು ಸಚಿವರಿಗೆ ಈ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸುರ್ಖಿ (ಮರಳಿನ ಬದಲಿಗೆ ಬಳಸುವ ವಸ್ತು) ಮತ್ತು ಸುಣ್ಣದ ಕಲ್ಲಿನ ಮಿಶ್ರಣದಿಂದ 1887–1895ರಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಈ ಮಿಶ್ರಣವು ಕಾಂಕ್ರೀಟ್‌ನಷ್ಟು ಶಕ್ತಿಯುತವಾದುದಲ್ಲ. ಒಂದು ವೇಳೆ ಅಣೆಕಟ್ಟೆಗೆ ಹಾನಿಯಾದರೆ ರಾಜ್ಯದ ಇಡುಕ್ಕಿ, ಕೊಚ್ಚಿ, ಕೊಟ್ಟಾಯಂ, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.