ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕೃತಕ ಬುದ್ಧಿಮತ್ತೆಯ ಜಾಗತಿಕ ಕೇಂದ್ರವಾಗಲೆಂದು ಬಯಸುತ್ತೇವೆ: ನರೇಂದ್ರ ಮೋದಿ

Last Updated 5 ಅಕ್ಟೋಬರ್ 2020, 16:23 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಕೃತಕ ಬುದ್ಧಿಮತ್ತೆಯ (ಎಐ) ಜಾಗತಿಕ ಕೇಂದ್ರವಾಗಬೇಕೆಂದು ಸರ್ಕಾರ ಬಯಸಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನ ಆಧಾರಿತ ಕಲಿಕೆ ಮತ್ತು ಕೌಶಲ್ಯವನ್ನು ಶಿಕ್ಷಣದ ಪ್ರಮುಖ ಭಾಗವಾಗಿಸುವ ಗುರಿಯನ್ನುರಾಷ್ಟ್ರೀಯ ಶಿಕ್ಷಣ ನೀತಿ 2020 ಹೊಂದಿದೆ ಎಂದಿದ್ದಾರೆ.

ಜಾಗತಿಕ ಕೃತಕ ಬುದ್ಧಿಮತ್ತೆ ವರ್ಚುಯಲ್ ಶೃಂಗ ಸಭೆಯಲ್ಲಿ ಮಾತಾಡಿದ ಅವರು, ತಂತ್ರಜ್ಞಾನವು ದೇಶದಲ್ಲಿ ಪಾರದರ್ಶಕತೆ ಮತ್ತು ಸೇವಾ ವಿತರಣೆಯನ್ನು ಸುಧಾರಿಸಿದೆ ಎಂದು ಹೇಳಿದ್ದಾರೆ.

'ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ 2020 (ಆರ್‌ಎಐಎಸ್‌ಇ) ಶೃಂಗವು ಕೃತಕ ಬುದ್ಧಿಮತ್ತೆಯ ಕುರಿತು ಚರ್ಚೆಯನ್ನು ಉತ್ತೇಜಿಸುವ ಒಂದು ಉತ್ತಮ ಪ್ರಯತ್ನವಾಗಿದೆ. ತಂತ್ರಜ್ಞಾನ ಮತ್ತು ಮಾನವ ಸಬಲೀಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ನೀವೆಲ್ಲರೂ ಸರಿಯಾಗಿ ಎತ್ತಿ ತೋರಿಸಿದ್ದೀರಿ. ತಂತ್ರಜ್ಞಾನವು ಕೆಲಸದ ಸ್ಥಳಗಳನ್ನು ಬದಲಾಯಿಸಿದೆ, ಸಂಪರ್ಕವನ್ನು ಸುಧಾರಿಸಿದೆ. ಮಾನವನ ಹಸ್ತಕ್ಷೇಪದಿಂದಾಗಿ ಸಾಮಾಜಿಕ ಜವಾಬ್ದಾರಿ ಮತ್ತು ಕೃತಕ ಬುದ್ಧಿಮತ್ತೆಯ ನಡುವಿನ ಸಂಪರ್ಕವನ್ನು ಇನ್ನಷ್ಟು ಉತ್ಕೃಷ್ಟಗೊಳಿಸಬಹುದು. ಕೃತಕ ಬುದ್ಧಿಮತ್ತೆಯು ಮಾನವನ ಬೌದ್ಧಿಕ ಶಕ್ತಿಗೆ ಗೌರವಪೂರ್ಣವಾಗಿದೆ ಎಂದು ಹೇಳಿದ್ದಾರೆ.

ಮಾನವರೊಂದಿಗಿನ ಕೃತಕ ಬುದ್ಧಿಮತ್ತೆಯ ತಂಡದ ಕೆಲಸವು ನಮ್ಮ ಗ್ರಹಕ್ಕೆ ಅದ್ಭುತಗಳನ್ನು ನೀಡಬಹುದಾಗಿದೆ. ತಂತ್ರಜ್ಞಾನವು ಭಾರತದಲ್ಲಿ ಪಾರದರ್ಶಕತೆ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದನ್ನು ನಾವು ಕಂಡುಕೊಂಡಿದ್ದೇವೆ. ಹೀಗಾಗಿ ಭಾರತವು ಎಐನ ಜಾಗತಿಕ ಕೇಂದ್ರವಾಗಬೇಕೆಂದು ನಾವು ಬಯಸುತ್ತೇವೆ. ಈ ಬಗ್ಗೆ ಈಗಾಗಲೇ ಹಲವಾರು ಭಾರತೀಯ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ಇದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಎಐ ಅನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎನ್ನುವ ಬಗ್ಗೆಯೂ ಖಾತರಿಪಡಿಸಿಕೊಳ್ಳುವುದು ಕೂಡ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಕ್ರಮಾವಳಿಯ ಪಾರದರ್ಶಕತೆಯು ನಂಬಿಕೆಯನ್ನು ಹುಟ್ಟುಹಾಕಲು ಪ್ರಮುಖ ಅಸ್ತ್ರವಾಗಿದೆ. ಅಲ್ಲದೆ ಹೊಣೆಗಾರಿಕೆಯು ಮುಖ್ಯವಾಗಿದೆ. ಕೃತಕ ಬುದ್ಧಿಮತ್ತೆಯ ಶಸ್ತ್ರಾಸ್ತ್ರೀಕರಣದ ವಿರುದ್ಧ ನಾವು ಜಗತ್ತನ್ನು ರಕ್ಷಿಸಬೇಕಾಗಿದೆ. ಎಐ ಬಗ್ಗೆ ನಾವು ಚರ್ಚಿಸುವಾಗ, ಮಾನವನ ಸೃಜನಶೀಲತೆ ಮತ್ತು ಭಾವನೆಗಳು ನಮ್ಮ ದೊಡ್ಡ ಶಕ್ತಿಯಾಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅವು ಯಂತ್ರಗಳಿಗಿಂತಲೂ ನಮ್ಮಲ್ಲಿರುವ ಅನನ್ಯ ಶಕ್ತಿಗಳಾಗಿವೆ ಎಂದಿದ್ದಾರೆ.

ಭಾರತವು ಇತ್ತೀಚೆಗಷ್ಟೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಅಳವಡಿಸಿಕೊಂಡಿದ್ದು, ಇದು ಶಿಕ್ಷಣದ ಪ್ರಮುಖ ಭಾಗವಾಗಿ ತಂತ್ರಜ್ಞಾನ ಆಧಾರಿತ ಕಲಿಕೆ ಮತ್ತು ಕೌಶಲ್ಯವನ್ನು ಕೇಂದ್ರೀಕರಿಸಿದೆ. ಇ-ಕೋರ್ಸ್‌ಗಳನ್ನು ವಿವಿಧ ಪ್ರಾದೇಶಿಕ ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದೂ ಅವರು ಹೇಳಿದರು.

ಈ ವರ್ಷದ ಏಪ್ರಿಲ್‌ನಲ್ಲಿ ಸರ್ಕಾರ 'ಯುವಕರಿಗಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ' ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮದಡಿ ಶಾಲೆಗಳ 11,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂಲ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ಈಗ ತಮ್ಮ ಎಐ ಯೋಜನೆಗಳನ್ನು ನಿರ್ಮಿಸುತ್ತಿದ್ದಾರೆ. ಡಿಜಿಟಲ್ ಮೂಲಸೌಕರ್ಯ, ಡಿಜಿಟಲ್ ವಿಷಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಇ-ಶಿಕ್ಷಣ ಘಟಕವನ್ನು ರಚಿಸುವ ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯನ್ನು ರಚಿಸಲಾಗುತ್ತಿದೆ ಎಂದೂ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT