ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

CM ಸ್ಥಾನಕ್ಕೆ ರಾಜೀನಾಮೆ ಘೋಷಣೆ: ಕೇಜ್ರಿವಾಲ್ ತೀರ್ಮಾನದ ಹಿಂದಿನ ಲೆಕ್ಕಾಚಾರ ಏನು?

ಶೆಮಿನ್ ಜಾಯ್
Published : 15 ಸೆಪ್ಟೆಂಬರ್ 2024, 20:45 IST
Last Updated : 15 ಸೆಪ್ಟೆಂಬರ್ 2024, 20:45 IST
ಫಾಲೋ ಮಾಡಿ
Comments

ನವದೆಹಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ ಕೇಜ್ರಿವಾಲ್ ಅವರು ಘೋಷಿಸಿರುವುದು ರಾಜಕೀಯವಾಗಿ ಎದೆಗಾರಿಕೆಯ ತೀರ್ಮಾನವೇ ಅಥವಾ ಭ್ರಷ್ಟಾಚಾರ ವಿರೋಧಿ ಹೋರಾಟದ ಹೀರೊ ಎಂಬ ಹೆಗ್ಗಳಿಕೆಯು ತಾವು ಹಗರಣವೊಂದರಲ್ಲಿ ಸಿಲುಕಿದ ನಂತರ ಮಾಸುತ್ತಿರುವುದನ್ನು ಅರಿತು, ಅದನ್ನು ಸರಿಪಡಿಸಿಕೊಳ್ಳುವ ತಂತ್ರಗಾರಿಕೆಯ ನಡೆಯೇ?

ಅವರ ತೀರ್ಮಾನವು ಈ ಎರಡರ ಪೈಕಿ ಯಾವುದು ಎಂಬುದು  ಈ ನಡೆಯನ್ನು ಯಾವ ದೃಷ್ಟಿಕೋನದಿಂದ ನೋಡಲಾಗುತ್ತದೆ ಎಂಬುದನ್ನು ಆಧರಿಸಿದೆ. ಜೈಲಿನಲ್ಲಿ ಇದ್ದಾಗ ಕೇಜ್ರಿವಾಲ್ ಅವರು, ‘ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂಬ ಒತ್ತಾಯಗಳಿಗೆ ಮಣಿದಿರಲಿಲ್ಲ.

ಎಎಪಿಯನ್ನು ಹಾಗೂ ದೆಹಲಿ ಸರ್ಕಾರವನ್ನು ಹಾಳುಗೆಡವಲು ಪಿತೂರಿಯೊಂದು ನಡೆದಿದೆ ಎಂದು ಅವರು ಆರೋಪಿಸಿದ್ದರು. ಆದರೆ ಈಗ, ದೆಹಲಿ ವಿಧಾನಸಭೆಗೆ ಚುನಾವಣೆ ಘೋಷಣೆ ಆಗುವುದಕ್ಕೆ ಐದು ತಿಂಗಳು ಮಾತ್ರ ಇರುವಾಗ ಅವರು ರಾಜೀನಾಮೆ ತೀರ್ಮಾನ ಪ್ರಕಟಿಸಿರುವುದು ಕುತೂಹಲಕಾರಿ.

ವಿಧಾನಸಭಾ ಚುನಾವಣೆಯು ಅವಧಿಗೆ ಮುನ್ನವೇ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆದರೆ, ‘ಪ್ರಾಮಾಣಿಕತೆಯ ಪ್ರಮಾಣಪತ್ರ’ ಪಡೆದುಕೊಳ್ಳುವ ಉದ್ದೇಶ ಹೊರತುಪಡಿಸಿದರೆ, ಈ ಆಗ್ರಹಕ್ಕೆ ಬೇರೆ ಕಾರಣ ಏನು ಎಂಬುದನ್ನು ಅವರು ಹೇಳಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ದೆಹಲಿ ಘಟಕದ ನಾಯಕರು, ಕೇಜ್ರಿವಾಲ್ ತೀರ್ಮಾನವನ್ನು ಗಿಮಿಕ್ ಎಂದು ಕರೆದಿದ್ದಾರೆ. ಆದರೆ ಕೇಜ್ರಿವಾಲ್ ಅವರು ಇದನ್ನು ರಾಜಕೀಯ ಹೋರಾಟ ಎಂದು ಬಣ್ಣಿಸಿದ್ದಾರೆ.

ಕೇಜ್ರಿವಾಲ್ ಅವರು ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಈ ತೀರ್ಮಾನ ಕೈಗೊಂಡಿರುವಂತಿದೆ. ಎಎಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಕೇಜ್ರಿವಾಲ್ ಭಾವಿಸಿರುವ ಹೊತ್ತಿನಲ್ಲಿ, ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಸಾಧನೆಯು ನಿರೀಕ್ಷೆಗೆ ಅನುಗುಣವಾಗಿ ಇಲ್ಲದಿರುವಾಗ ಈ ತೀರ್ಮಾನ ಪ್ರಕಟವಾಗಿದೆ.

ಚುನಾವಣಾ ಪ್ರಚಾರಗಳನ್ನು ರೂಪಿಸುವ ವಿಚಾರದಲ್ಲಿ ಕೇಜ್ರಿವಾಲ್ ಅವರು ಮಾತಿನ ಆಡಂಬರ ಹಾಗೂ ಆರ್ಭಟವನ್ನು ನೆಚ್ಚಿಕೊಳ್ಳುತ್ತಾರೆ. ಇದನ್ನು ‘ಇಂಡಿಯಾ ಅಗೇನ್ಸ್ಟ್‌ ಕರಪ್ಷನ್’ ಸಂಘಟನೆಯ ಹೋರಾಟ ನಡೆಯುತ್ತಿದ್ದ ದಿನಗಳಿಂದಲೂ ಗಮನಿಸಲಾಗಿದೆ. ಈಗ, ಆಮ್‌ ಆದ್ಮಿ ಪಕ್ಷದ ಭ್ರಷ್ಟಾಚಾರ ವಿರೋಧಿ ನಿಲುವಿನ ವಿಚಾರದಲ್ಲಿ ಜನರು ಅನುಮಾನಗಳನ್ನು ಹೊಂದಿರುವಂತೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಹೊಸ ಸಂಕಥನವನ್ನು ಕಟ್ಟಲು ಯತ್ನಿಸುತ್ತಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಪಡೆಯಲು ಕೇಜ್ರಿವಾಲ್ ಯಶಸ್ವಿ ಆಗಿದ್ದಾರಾದರೂ, ಜಾಮೀನು ನೀಡುವಾಗ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳ ಪರಿಣಾಮವಾಗಿ ಕೇಜ್ರಿವಾಲ್ ಅವರು ದಾಖಲೆಗಳಲ್ಲಿ ಮಾತ್ರ ಮುಖ್ಯಮಂತ್ರಿ ಆದಂತಾಗಿದೆ.

ಎಎಪಿ ಪಕ್ಷವು ತಾನು ಹೇಳಿದ್ದನ್ನು ಮಾಡಿ ತೋರಿಸಬಲ್ಲದೇ ಎಂಬ ಪ್ರಶ್ನೆಯು ಜನರಿಂದ ಬರಬಹುದು, ಇದು ಮತಗಳನ್ನು ಸೆಳೆಯುವ ತಮ್ಮ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು ಎಂಬ ಲೆಕ್ಕಾಚಾರ ಕೇಜ್ರಿವಾಲ್ ಅವರಿಗೆ ಇದೆ. ಅಲ್ಲದೆ, ಒಂಬತ್ತು ವರ್ಷಗಳಿಂದ ಅಧಿಕಾರದಲ್ಲಿ ಇರುವ ಅವರ ಮಾತುಗಳಲ್ಲಿ ಈಗ ಹೊಸತನ ಎನ್ನುವುದು ಉಳಿದಿಲ್ಲ.

ಆರೋಪಗಳ ಪರಿಣಾಮವಾಗಿ, ಎಎಪಿ ಹಾಗೂ ಕೇಜ್ರಿವಾಲ್ ಅವರ ‘ಭ್ರಷ್ಟಾಚಾರ ವಿರೋಧಿ’ ಎಂಬ ಹೆಗ್ಗಳಿಕೆಗೆ ಪೆಟ್ಟು ಬಿದ್ದಿದೆ. ಆದರೆ, ರಾಜೀನಾಮೆ ನೀಡುವ ಮೂಲಕ ತಾವು ಅಧಿಕಾರದಾಹಿ ಅಲ್ಲ ಎಂದು ತೋರಿಸಿಕೊಳ್ಳುವುದು ಅವರ ಇರಾದೆ. ರಾಜೀನಾಮೆ ನೀಡುವುದರಿಂದ ತಮಗೆ ಹೊಸ ಸಂಗತಿಗಳ ಬಗ್ಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ಅವರು ಭಾವಿಸಿದ್ದಾರೆ.

ಭಾನುವಾರದ ಭಾಷಣದಲ್ಲಿ ಕೇಜ್ರಿವಾಲ್ ಅವರು ತಮ್ಮ ಸರ್ಕಾರವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತೋರಿದ ಸಾಧನೆಯನ್ನು ಉಲ್ಲೇಖಿಸಿದರಾದರೂ, ಹಿಂದೆಲ್ಲ ಮಾಡುತ್ತಿದ್ದಂತೆ ಈ ಬಾರಿ ಅದರ ಬಗ್ಗೆ ಹೆಚ್ಚು ಒತ್ತು ನೀಡಲಿಲ್ಲ. ಈ ಬಾರಿ ಅವರು ತಮ್ಮ ಮಾತಿನಲ್ಲಿ ಒತ್ತು ನೀಡಿದ್ದು ತಾವೆಷ್ಟು ಪ್ರಾಮಾಣಿಕ ಎಂಬುದನ್ನು ಹೇಳಿಕೊಳ್ಳಲಷ್ಟೆ.

Highlights - ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಕೇಜ್ರಿವಾಲ್ ಪ್ರಾಮಾಣಿಕ ಎಂದು ಹೇಳಿಕೊಳ್ಳುವುದಕ್ಕೆ ಒತ್ತು ಕೇಜ್ರಿವಾಲ್ ಕೈಕಟ್ಟಿಹಾಕಿದ ಜಾಮೀನಿನ ಷರತ್ತುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT