ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಜೆಸಿಬಿ ಆಪರೇಟರ್‌ಗೊಲಿದ 'ಸಾಹಿತ್ಯ' ಪ್ರಶಸ್ತಿ

Published 23 ಜುಲೈ 2023, 14:41 IST
Last Updated 23 ಜುಲೈ 2023, 14:41 IST
ಅಕ್ಷರ ಗಾತ್ರ

ಕಣ್ಣೂರು (ಕೇರಳ): ರಾತ್ರಿ ವೇಳೆ ಜೆಸಿಬಿ ಆಪರೇಟರ್‌ ಕೆಲಸ, ಬೆಳಿಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕಾಯಕ, ಬಿಡುವಿನ ಸಮಯದಲ್ಲಿ ಬರವಣಿಗೆಯ ಗೀಳು... ಇದು ಕೇರಳ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ತಾರೆ ಅಖಿಲ್‌ ಕೆ. ದಿನಚರಿ.

ಕುಟುಂಬವನ್ನು ಪೋಷಿಸುವ ಸಲುವಾಗಿ ಅರ್ಧದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿರುವ 28 ವರ್ಷದ ಅಖಿಲ್‌ ಅವರು ಕೇರಳ ಸಾಹಿತ್ಯ ಅಕಾಡೆಮಿ ನೀಡುವ ಪ್ರತಿಷ್ಟಿತ ವಾರ್ಷಿಕ ಪ್ರಶಸ್ತಿಗೆ ಈಚೆಗೆ ಭಾಜನರಾಗಿದ್ದಾರೆ. ಅಖಿಲ್‌ ಅವರ ಸಣ್ಣ ಕಥೆಗಳ ಸಂಗ್ರಹ ‘ನೀಲಚಡಯನ್‌’ ಕೃತಿಗೆ ಈ ಪುರಸ್ಕಾರ ಲಭಿಸಿದೆ.

‘ನನ್ನನ್ನು ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಾನು ಪ್ರಶಸ್ತಿ ನಿರೀಕ್ಷಿಸಿರಲಿಲ್ಲ’ ಎಂದು ಅಖಿಲ್‌ ಪಿಟಿಐಗೆ ತಿಳಿಸಿದ್ದಾರೆ.

‘ಪ್ಲಸ್‌ –ಟು (ಪಿಯುಸಿ) ಬಳಿಕ ಶಿಕ್ಷಣ ಮುಂದುವರಿಸಬೇಕೆಂಬ ಹಂಬಲವಿತ್ತು. ಆದರೆ ಬದುಕಿನ ಜಂಜಾಟದ ನಡುವೆ ಅದು ಕೈಗೂಡಿಲ್ಲ. ತಂದೆ,ತಾಯಿ, ಅಜ್ಜಿ ಮತ್ತು ತಮ್ಮನನ್ನು ಸಲಹುವ ಜವಾಬ್ದಾರಿ ನನ್ನ ಹೆಗಲ ಮೇಲಿದೆ’ ಎಂದೂ ಅವರು ತಮ್ಮ ಸಂಕಷ್ಟಗಳನ್ನು ಸ್ಮರಿಸಿಕೊಂಡಿದ್ದಾರೆ. ಅಖಿಲ್‌ ಅವರ ತಾಯಿ ಕೂಡ ದಿನಗೂಲಿ ನೌಕರಿ ಮಾಡುತ್ತಾರೆ.

‘ರಾತ್ರಿ ವೇಳೆ ಬಿಡುವಿನ ಸಮಯದಲ್ಲಿ ನನ್ನ ಕಲ್ಪನೆಗಳಲ್ಲಿ ಮೂಡಿ ಬರುವ ಕಥೆಗಳನ್ನು ಹೇಳಲಾರಂಭಿಸಿದೆ. ದಿನನಿತ್ಯದ ಬದುಕಿನ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಕಥೆಗಳನ್ನು ಹೆಣೆಯುತ್ತೇನೆ. ಇದರ ಪರಿಣಾಮವಾಗಿಯೇ ‘ನೀಲಚಡಯನ್‌’ ಕೃತಿ ಹೊರಬಂದಿದೆ’ ಎಂದು ಅವರ ತಿಳಿಸಿದ್ದಾರೆ.

ಕೇರಳದ ಇಡುಕ್ಕಿಯಲ್ಲಿ ಪತ್ತೆಯಾಗಿರುವ ಗಾಂಜಾ ತಳಿಯ ಗಿಡಕ್ಕೆ ‘ನೀಲಚಡಯನ್‌’ ಎನ್ನುತ್ತಾರೆ. ಈ ಹೆಸರನ್ನು ಕೃತಿಯ ಶೀರ್ಷಿಕೆಯಾಗಿ ಬಳಸಿದ್ದೇನೆ ಎಂದಿದ್ದಾರೆ.

'₹20 ಸಾವಿರ ಪಾವತಿಸಿದರೆ ಪುಸ್ತಕ ಪ್ರಕಟಿಸುತ್ತೇವೆ ಎಂಬ ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ಗಮನಿಸಿ, ನಾನು ಉಳಿತಾಯ ಮಾಡಿದ್ದ ₹10,000 ಹಾಗೂ ತಾಯಿ ನೀಡಿದ ₹10,000 ಪಾವತಿಸಿ ಈ ಪುಸ್ತಕ ಪ್ರಕಟಿಸಿದ್ದೆ. ಆಗ ಅದು ಆನ್‌ಲೈನ್‌ ಮೂಲಕ ಮಾತ್ರವೇ ಮಾರಾಟವಿತ್ತು’ ಎಂದಿದ್ದಾರೆ.

ಆರಂಭದಲ್ಲಿ ಪುಸ್ತಕಗಳು ಮಾರಾಟವಾಗಲಿಲ್ಲ. ಚಿತ್ರಕಥೆಗಾರ ಬಿಪಿನ್‌ ಚಂದ್ರನ್‌ ಅವರು ಪುಸ್ತಕದ ಕುರಿತು ಫೇಸ್‌ಬುಕ್‌ನಲ್ಲಿ ಬರೆದ ಬಳಿಕ ಜನರಿಂದ ಬೇಡಿಕೆ ಬಂತು. ಇದೀಗ ಈ ಪುಸ್ತಕದ ಎಂಟನೇ ಆವೃತ್ತಿ ಮುದ್ರಣದಲ್ಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT