ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ: ಕೈಕೋಳ ಯಾರಿಗೆ ತೊಡಿಸಬೇಕು?

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆಯಲ್ಲಿರುವ ವಿವರ
Published 13 ಆಗಸ್ಟ್ 2023, 23:49 IST
Last Updated 13 ಆಗಸ್ಟ್ 2023, 23:49 IST
ಅಕ್ಷರ ಗಾತ್ರ

ನವದೆಹಲಿ: ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗುವ ವ್ಯಕ್ತಿಗಳಿಗೆ ಕೈಕೊಳ (ಬೇಡಿ) ತೊಡಿಸುವುದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಎದುರಾಗಿದ್ದ ಗೊಂದಲಕ್ಕೆ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆಯಲ್ಲಿ ಪರಿಹಾರ ಸಿಕ್ಕಿದೆ.

ಸಂಸತ್‌ನ ಕೆಳಮನೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ (ಅಪರಾಧ ಪ್ರಕ್ರಿಯಾ ಸಂಹಿತೆ) ಬದಲಿಗೆ ಈ ಹೊಸ ಮಸೂದೆಯನ್ನು ಮಂಡಿಸಲಾಗಿದೆ. ಅಪರಾಧದ ಸ್ವರೂಪ ಮತ್ತು ಅದರ ತೀವ್ರತೆ ಆಧರಿಸಿ ಬಂಧನಕ್ಕೆ ಒಳಗಾದವರಿಗೆ ಕೈಕೋಳ ತೊಡಿಸಬೇಕು ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ. 

ಅಪರಾಧ ಕೃತ್ಯ ಎಸಗಿದವರಿಗೆ ಕೈಕೋಳ ತೊಡಿಸುವುದಕ್ಕೂ ಮೊದಲು ಪೊಲೀಸರು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಿಂದ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಆದರೆ, ಹಲವು ಸಂದರ್ಭಗಳಲ್ಲಿ ಪೊಲೀಸರು ಇದನ್ನು ಉಲ್ಲಂಘಿಸಿ ತೊಂದರೆಗೆ ಸಿಲುಕುತ್ತಿದ್ದರು. 

ಅಪರಾಧ ಕೃತ್ಯವನ್ನು ಅಭ್ಯಾಸ ಮಾಡಿಕೊಂಡವರು, ಬಂಧನದಿಂದ ತಪ್ಪಿಸಿಕೊಂಡು ಪದೇ ಪದೇ ಅಪರಾಧ ಕೃತ್ಯ ಎಸಗುವವರು, ಸಂಘಟಿತ ಅಪರಾಧ ಗುಂಪಿನ ಸದಸ್ಯ, ಭಯೋತ್ಪಾದನಾ ಕೃತ್ಯ ಎಸಗಿದ ಆರೋಪಿ, ಮಾದಕ ವಸ್ತು ಕಳ್ಳಸಾಗಣೆದಾರ, ಕೊಲೆಗಾರ, ಅತ್ಯಾಚಾರಿ, ಖೋಟಾನೋಟು ಪ್ರಕರಣದ ಆರೋಪಿ, ಶಿಶುಕಾಮಿ ಹಾಗೂ ಆರ್ಥಿಕ ಅಪರಾಧಿಗಳಿಗೆ ಕೈಕೋಳ ತೊಡಿಸಬಹುದು ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.

ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸಂಗ್ರಹಿಸಿದವರು, ಸಾರ್ವಜನಿಕರ ಮೇಲೆ ಆಸಿಡ್‌ ಎರಚಿದ ಆರೋಪಿ, ರಾಜ್ಯದ ವಿರುದ್ಧ ಅಪರಾಧ ಕೃತ್ಯ ಎಸಗಿದವರು, ಭಾರತದ ಒಗ್ಗಟ್ಟು, ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತಂದವರು ಅಥವಾ ಆರ್ಥಿಕ ಅಪರಾಧ ಕೃತ್ಯ ಎಸಗಿದವರಿಗೆ ಕೈಕೋಳ ತೊಡಿಸಬಹುದು ಎಂದು ಮಸೂದೆಯ ಸೆಕ್ಷನ್‌ 43(3) ಅಡಿ ತಿಳಿಸಲಾಗಿದೆ.

ನ್ಯಾಯಾಲಯ ಹೇಳಿದ್ದೇನು?

ಕೈಕೋಳ ತೊಡಿಸುವುದಕ್ಕೆ ಸಂಬಂಧಿಸಿದಂತೆ ಕಳೆದ ಜೂನ್‌ನಲ್ಲಿ ಕರ್ನಾಟಕ ಹೈಕೋರ್ಟ್‌ ಕೂಡ ಮಹತ್ವದ ಆದೇಶ ಹೊರಡಿಸಿತ್ತು.

ಆರೋಪಿ, ವಿಚಾರಣಾಧೀನ ಕೈದಿ ಅಥವಾ ಅಪರಾಧಿಗೆ ಬಲವಾದ ಕಾರಣವಿಲ್ಲದೆ ಕೈಕೋಳ ತೊಡಿಸಬಾರದು.‌ ಒಂದು ವೇಳೆ ಕೈಕೋಳ ತೊಡಿಸಿದ್ದರೆ ಈ ಬಗ್ಗೆ ಕೇಸ್‌ ಡೈರಿ ಅಥವಾ ಸಂಬಂಧಪಟ್ಟ ದಾಖಲೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ನಮೂದಿಸಬೇಕು ಎಂದು ನಿರ್ದೇಶನ ನೀಡಿತ್ತು.

2016ರಲ್ಲಿ ಪತ್ರಿಕೆಯೊಂದರ ಸಂಪಾದಕರೊಬ್ಬರನ್ನು ಸಾರ್ವಜನಿಕ ಸ್ಥಳದಲ್ಲಿ ಬಂಧಿಸಿ ಅಕ್ರಮವಾಗಿ ಕೈಕೋಳ ತೊಡಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ವ್ಯಕ್ತಿಗೆ ₹ 4 ಲಕ್ಷ ಪರಿಹಾರ ನೀಡುವಂತೆ ಕೇಂದ್ರಾಡಳಿತ ಪ್ರದೇಶವಾದ ದಮನ್‌ ಮತ್ತು ದಿಯು ಹಾಗೂ ದಾದ್ರ ಮತ್ತು ನಗರ್‌ ಹವೇಲಿ ಆಡಳಿತಕ್ಕೆ ಬಾಂಬೆ ಹೈಕೋರ್ಟ್‌ ನಿರ್ದೇಶಿಸಿತ್ತು.

ಅಲ್ಲದೇ, ಚೆಕ್‌ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ಬಂಧನದ ವಾರಂಟ್‌ ಮೇಲೆ ಕಾನೂನು ವಿದ್ಯಾರ್ಥಿ ಈಶ್ವರ್‌ ದೈವತೆ ಎಂಬುವರಿಗೆ ಪೊಲೀಸರು ಕೈಕೋಳ ತೊಡಿಸಿದ್ದರು. ಸಂತ್ರಸ್ತ ವಿದ್ಯಾರ್ಥಿಗೆ ₹ 4 ಲಕ್ಷ ಪರಿಹಾರ ನೀಡುವಂತೆಯೂ ಹೈಕೋರ್ಟ್ ಸೂಚಿಸಿತ್ತು.

ಕೈಕೋಳ ತೊಡಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಈಗಾಗಲೇ ಹಲವು ಬಾರಿ ನಿರ್ದೇಶನ ನೀಡಿದೆ.  

ಅಜಾಗರೂಕವಾಗಿ ಕೈಕೋಳ ತೊಡಿಸುವುದು ಹಾಗೂ ಸಾರ್ವಜನಿಕವಾಗಿ ಕೈಕೋಳ ತೊಡಿಸಿ ಅವಮಾನಿಸುವುದು ನಮ್ಮ ಸೂಕ್ಷ್ಮ ಸಂವೇದನೆಯನ್ನು ಅವಮಾನಿಸಿದಂತಾಗುತ್ತದೆ. ಜೊತೆಗೆ, ಇದು ಸಂಸ್ಕೃತಿಗೂ ಕಳಂಕ ತರುತ್ತದೆ ಎಂದು 1978ರಲ್ಲಿಯೇ ಸ್ಪಷ್ಟಪಡಿಸಿದೆ. 

‘ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಬಂಧಿಸಿ, ಹಿಂಸಿಸುವುದು ಆತನ ಗೌರವಕ್ಕೆ ಚ್ಯುತಿ ತರುತ್ತದೆ. ಇದು ನಾಗರಿಕ ಸಮಾಜಕ್ಕಷ್ಟೇ ಅಸಹ್ಯಕರವಲ್ಲ; ಸಂವಿಧಾನದ ಆತ್ಮಕ್ಕೂ ಧಕ್ಕೆ ತರುತ್ತದೆ’ ಎಂದು ಮತ್ತೊಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT