ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನರಚನಾ ಮಂಡಳಿ ಇಲ್ಲದಿದ್ದಾಗ 370ನೇ ವಿಧಿ ರದ್ದತಿಗೆ ಶಿಫಾರಸು ಮಾಡುವವರು ಯಾರು?

ಜಮ್ಮು–ಕಾಶ್ಮೀರ: ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಆರಂಭಿಸಿದ ‘ಸುಪ್ರೀಂ’
Published 2 ಆಗಸ್ಟ್ 2023, 16:17 IST
Last Updated 2 ಆಗಸ್ಟ್ 2023, 16:17 IST
ಅಕ್ಷರ ಗಾತ್ರ

ನವದೆಹಲಿ:ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ಆರಂಭಿಸಿತು.

‘ಶಾಸನ ರಚನೆ ಅಧಿಕಾರ ಹೊಂದಿದ ಮಂಡಳಿಯೇ ಅಸ್ತಿತ್ವದಲ್ಲಿ ಇಲ್ಲ ಎಂದಾದರೆ, ಜಮ್ಮು–ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡುವವರು ಯಾರು’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠ ಪ್ರಶ್ನಿಸಿತು.

ನ್ಯಾಯಮೂರ್ತಿಗಳಾದ ಸಂಜಯಕಿಶನ್‌ ಕೌಲ್, ಸಂಜೀವ್‌ ಖನ್ನಾ, ಬಿ.ಆರ್‌.ಗವಾಯಿ ಹಾಗೂ ಸೂರ್ಯಕಾಂತ್ ಈ ಪೀಠದಲ್ಲಿದ್ದಾರೆ.

‘ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಈ ಅವಕಾಶ (370ನೇ ವಿಧಿ) ತಾತ್ಕಾಲಿಕವಾದುದು ಎಂದು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. ಆದರೆ, 1957ರಲ್ಲಿ ಜಮ್ಮು–ಕಾಶ್ಮೀರದ ಶಾಸನಸಭೆ ಅವಧಿ ಮುಕ್ತಾಯಗೊಂಡ ನಂತರ, ಈ ಅವಕಾಶ ಶಾಶ್ವತ ಹೇಗಾಯಿತು’ ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರನ್ನು ಪೀಠ ಪ್ರಶ್ನಿಸಿತು.

‘ಅಧಿಸೂಚನೆ ಹೊರಡಿಸುವ ಮೂಲಕ, 370ನೇ ವಿಧಿಯನ್ನು ರದ್ದುಪಡಿಸಲಾಗಿದೆ ಅಥವಾ ನಿರ್ದಿಷ್ಟ ಬದಲಾವಣೆ ಮತ್ತು ವಿನಾಯಿತಿಗಳೊಂದಿಗೆ ಜಾರಿಯಲ್ಲಿದೆ ಎಂದು ರಾಷ್ಟ್ರಪತಿ ಘೋಷಿಸಬಹುದು. ರಾಷ್ಟ್ರಪತಿ ಇಂತಹ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ, ಈ ಕುರಿತು ಶಾಸನಸಭೆಯ ಶಿಫಾರಸು ಅಗತ್ಯ’ ಎಂಬ 370ನೇ ವಿಧಿಯಲ್ಲಿರುವ ಅವಕಾಶವನ್ನು ಪೀಠ ಪ್ರಸ್ತಾಪಿಸಿತು.

‘ಶಾಸನಸಭೆಯ ಅವಧಿ ಕೊನೆಗೊಂಡಾಗ ಏನಾಗುತ್ತದೆ? ಅಲ್ಲದೇ, ಯಾವ ಶಾಸನಸಭೆಯೂ ಅನಿರ್ದಿಷ್ಟಾವಧಿಗೆ ಕಾರ್ಯ ನಿರ್ವಹಿಸುವಂತೆಯೂ ಇಲ್ಲ ಅಲ್ಲವೇ’ ಎಂದು ಸಿಬಲ್‌ ಅವರಿಗೆ ಸಿಜೆಐ ಕೇಳಿದರು.

‘370ನೇ ವಿಧಿ ರದ್ದುಗೊಳಿಸಿ ರಾಷ್ಟ್ರಪತಿ ಅಧಿಸೂಚನೆ ಹೊರಡಿಸಬೇಕಾದಲ್ಲಿ ಶಾಸನಸಭೆಯ ಶಿಫಾರಸು ಅಗತ್ಯ. ಆದರೆ, ಶಾಸನಸಭೆಯೇ ಅಸ್ತಿತ್ವದಲ್ಲಿ ಇಲ್ಲ ಎಂದಾದಲ್ಲಿ ಏನು ಕ್ರಮ ಎಂಬುದೇ ಇಲ್ಲಿ ನಮ್ಮ ಮುಂದಿರುವ ಪ್ರಶ್ನೆ’ ಎಂದು ಸಿಜೆಐ ಹೇಳಿದರು.

‘ಇದನ್ನೇ ಅರ್ಜಿದಾರರು ಕೇಳುತ್ತಿರುವುದು. ಇಂಥ ಶಿಫಾರಸು ಇಲ್ಲದೇ ರಾಷ್ಟ್ರಪತಿಯವರು 370ನೇ ವಿಧಿಯನ್ನು ರದ್ದುಗೊಳಿಸಿ ಅಧಿಸೂಚನೆ ಪ್ರಕಟಿಸುವಂತಿಲ್ಲ ಎಂಬುದರ ಕುರಿತೇ ಈ ಪ್ರಕರಣ’ ಎಂದು ಸಿಬಲ್‌ ಪ್ರತಿಕ್ರಿಯಿಸಿದರು.

‘ಹಾಗಾದರೆ, ಜಮ್ಮು–ಕಾಶ್ಮೀರ ಶಾಸನಸಭೆ ಅವಧಿ 1957ರಲ್ಲಿ ಕೊನೆಗೊಂಡ ನಂತರ, 370ನೇ ವಿಧಿಗೆ ಸಂಬಂಧಿಸಿ ಯಾವ ಕ್ರಮ ಕೈಗೊಳ್ಳಬಾರದು ಎಂಬುದು ನಿಮ್ಮ ವಾದವೇ’ ಎಂದು ನ್ಯಾಯಮೂರ್ತಿ ಗವಾಯಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್‌, ‘ನ್ಯಾಯಾಲಯವು ಈಗ ಸಂವಿಧಾನದಲ್ಲಿರುವ ಅವಕಾಶವನ್ನು ವ್ಯಾಖ್ಯಾನಿಸುತ್ತಿದೆ. ಸಂವಿಧಾನಕ್ಕೆ ಅನುಗುಣವಾಗಿರದಿದ್ದ ಪ್ರಕ್ರಿಯೆಯನ್ನು ಸಮರ್ಥನೆ ಮಾಡುತ್ತಿಲ್ಲ’ ಎಂದರು.

‘ರಾಜಕೀಯ ಉದ್ದೇಶದ ಕ್ರಮವೇ ಆಗಿದ್ದರೂ 370ನೇ ವಿಧಿಯನ್ನು ರದ್ದುಗೊಳಿಸಲಾಗಿದೆ. ಇದು ಸಾಂವಿಧಾನಿಕ ಕಾಯ್ದೆಯಾಗಿರಲಿಲ್ಲ. ಈ ವಿಚಾರವಾಗಿ ಸಂಸತ್ತೇ ಶಾಸನಸಭೆಯ ಜವಾಬ್ದಾರಿ ನಿರ್ವಹಿಸುವ ಮೂಲಕ 370ನೇ ವಿಧಿಯನ್ನು ರದ್ದುಗೊಳಿಸಿದೆ. ವಿಶೇಷ ಸ್ಥಾನಮಾನದ ರದ್ದತಿ ಜಮ್ಮು–ಕಾಶ್ಮೀರ ಜನರ ಇಚ್ಛೆಯಾಗಿತ್ತು ಎಂಬ ಕಾರಣ ನೀಡಲಾಗಿತ್ತು. ಕೇಂದ್ರ ಸರ್ಕಾರ ಇಂಥ ಅಧಿಕಾರ ಚಲಾಯಿಸಬಹುದೇ’ ಎಂದು ವಕೀಲ ಸಿಬಲ್‌ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಆಗ, ನ್ಯಾಯಪೀಠವು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ವಿಚಾರಣೆ: 370ನೇ ವಿಧಿ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸೋಮವಾರ ಹಾಗೂ ಶುಕ್ರವಾರ ಹೊರತುಪಡಿಸಿ ಉಳಿದ ದಿನಗಳಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ.

ಹೊಸದಾಗಿ ಸಲ್ಲಿಕೆಯಾಗುವ ಹಾಗೂ ಇತರ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಮತ್ತು ಶುಕ್ರವಾರ ನಡೆಸುವುದಾಗಿ ಹೇಳಿದೆ.

ದ್ವೇಷ ಭಾಷಣ ಹಿಂಸಾಚಾರಕ್ಕೆ ಅವಕಾಶ ಕೊಡಬೇಡಿ

‘ಸುಪ್ರೀಂ’ ಪ್ರಜಾವಾಣಿ ವಾರ್ತೆ/ಪಿಟಿಐ ನವದೆಹಲಿ: ಹರಿಯಾಣದ ನೂಹ್‌ನಲ್ಲಿ ನಡೆದ ಕೋಮು ಗಲಭೆಯನ್ನು ವಿರೋಧಿಸಿ ವಿಎಚ್‌ಪಿ ಮತ್ತು ಬಜರಂಗದಳ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ರ್‍ಯಾಲಿಗಳಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌ ಪ್ರತಿಭಟನೆಗಳ ವೇಳೆ ಯಾವುದೇ ದ್ವೇಷ ಭಾಷಣ ಅಥವಾ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬುಧವಾರ ನಿರ್ದೇಶನ ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಎಸ್‌.ವಿ.ಭಾಟಿ ಅವರ ಪೀಠ ‘ಹೆಚ್ಚುವರಿ ಭದ್ರತಾ ಪಡೆ ಅಥವಾ ಅರೆಸೇನಾ ಪಡೆಗಳನ್ನು ನಿಯೋಜಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಬೇಕು’ ಎಂದು ಆದೇಶಿಸಿತು. ‘ದ್ವೇಷ ಭಾಷಣ ಮತ್ತು ಹಿಂಸಾಚಾರ ತಡೆಗಟ್ಟುವ ಸಂಬಂಧ ಸಂಬಂಧಪಟ್ಟ ಪ್ರಾಧಿಕಾರಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದನ್ನು ಖಾತ್ರಿಪಡಿಸಿ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ.ರಾಜು ಅವರಿಗೆ ನ್ಯಾಯಪೀಠ ಸೂಚಿಸಿತು. ಬಲಪಂಥೀಯ ಗುಂಪುಗಳಾದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮತ್ತು ಬಜರಂಗ ದಳ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್‌) ವಿವಿಧೆಡೆ 23 ಪ್ರತಿಭಟನಾ ಮೆರವಣಿಗೆಗಳನ್ನು ಆಯೋಜಿಸಿವೆ ಎಂದು ಅರ್ಜಿದಾರರಾದ ಪತ್ರಕರ್ತ ಶಾಹೀನ್‌ ಅಬ್ದುಲ್ಲಾ ಪರ ವಕೀಲ ಸಿ.ಯು. ಸಿಂಗ್‌ ಪೀಠದ ಗಮನಕ್ಕೆ ತಂದರು. ಈ ವೇಳೆ ಪೀಠ ಈ ಕುರಿತು ಆದೇಶ ನೀಡಿತು. ದ್ವೇಷ ಭಾಷಣ ಮಾಡಿದ್ದು ಕಂಡುಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ ಕಳೆದ ವರ್ಷ ಅಕ್ಟೋಬರ್ ಹಾಗೂ ಇದೇ ವರ್ಷ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶಗಳನ್ನು ಅಬ್ದುಲ್ಲಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣಗಳು ಇರುವುದಿಲ್ಲ ಹಿಂಸಾಚಾರ ನಡೆಯದಂತೆ ಅಥವಾ ಸ್ವತ್ತುಗಳಿಗೆ ಹಾನಿಯಾಗದಂತೆ ಪೊಲೀಸರು ಸೇರಿದಂತೆ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತವೆ ಎಂಬ ಆಶಾಭಾವ ಮತ್ತು ನಂಬಿಕೆ ಇದೆ’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT