ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರಿಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ: ತಮಿಳುನಾಡು

Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಚೆನ್ನೈ: ‘ತಮಿಳುನಾಡಿಗೆ ಹರಿಸಲು ನೀರೆಲ್ಲಿದೆ?’ ಎಂಬ ಕರ್ನಾಟಕದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತಿಗೆ ತಮಿಳುನಾಡು ಸರ್ಕಾರ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದೆ. ಅಂತರರಾಜ್ಯ ನದಿ ನೀರಿನ ಹಂಚಿಕೆಯ ಖಾತ್ರಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದೆ.

ಕರ್ನಾಟಕದಿಂದ ತಮಿಳುನಾಡಿಗೆ ಸೆ. 13ರಿಂದ ಹದಿನೈದು ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ನಷ್ಟು (ಅರ್ಧ ಟಿಎಂಸಿ ಅಡಿ) ನೀರನ್ನು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮಂಗಳವಾರ ಶಿಫಾರಸು ಮಾಡಿತು. 

ಡಿಕೆಶಿ ಪ್ರತಿಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸಿರುವ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್, ‘ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕೊರತೆಯ ವರ್ಷಗಳಲ್ಲಿ ಸಂಬಂಧಪಟ್ಟ ರಾಜ್ಯಗಳ ನಡುವೆ ನೀರು ಹಂಚಿಕೆಯಾಗಬೇಕು. ಸಿಡಬ್ಲ್ಯುಆರ್‌ಸಿ ಮತ್ತು ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರವು ಮಳೆ ಕೊರತೆ ಮತ್ತು ಅಣೆಕಟ್ಟುಗಳಲ್ಲಿನ ಸಂಗ್ರಹಣೆಯ ಆಧಾರದ ಮೇಲೆ ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವನ್ನು ಲೆಕ್ಕಾಚಾರ ಮಾಡುತ್ತಿದೆ. ನೀರು ಬಿಡುವಂತೆ ಕರ್ನಾಟಕಕ್ಕೆ 15 ದಿನಗಳಿಗೊಮ್ಮೆ ನಿರ್ದೇಶನ ನೀಡಲಾಗುತ್ತಿದೆ. ಅದೂ ಸೂಚಿತ ಪ್ರಮಾಣಕ್ಕಿಂತಲೂ ಕಡಿಮೆ. ಅದನ್ನೂ ಹರಿಸಲು ಕರ್ನಾಟಕ ನಿರಾಕರಿಸುತ್ತಿರುವುದು ಆಘಾತಕಾರಿ ಬೆಳವಣಿಗೆ’ ಎಂದು ಹೇಳಿದ್ದಾರೆ.

ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಹೇಳಿದ ಸಿಡಬ್ಲ್ಯುಆರ್‌ಸಿಯ ಮಂಗಳವಾರದ ಶಿಫಾರಸನ್ನು ಉಲ್ಲೇಖಿಸಿದ ಅವರು, ’ಕೊರತೆಯ ಅನುಪಾತವನ್ನು ಲೆಕ್ಕ ಹಾಕಿದರೆ ಇದು ನಮಗೆ ಸಿಗಬೇಕಾದ ಪಾಲಿನಲ್ಲಿ ಕಡಿಮೆ ಪ್ರಮಾಣದ್ದಾಗಿದೆ’ ಎಂದಿದ್ದಾರೆ.

‘ನೀರು ಹರಿಸಲು ಸಾಧ್ಯವಿಲ್ಲ ಎಂಬ ಕರ್ನಾಟಕದ ಸಚಿವ ಡಿ.ಕೆ ಶಿವಕುಮಾರ್‌ ಅವರ ಹೇಳಿಕೆ ಯಾವುದೇ ರೀತಿಯಲ್ಲೂ ನ್ಯಾಯಸಮ್ಮತವಲ್ಲ. ಕರ್ನಾಟಕವು ಕುಡಿಯುವ ನೀರಿನ ನೆಪ ಮುಂದಿಟ್ಟು ನೀರು ಹರಿಸುವುದನ್ನು ನಿರಾಕರಿಸುವ ಮೂಲಕ ತಮಿಳುನಾಡಿನ ರೈತರಿಗೆ ದ್ರೋಹ ಮಾಡುತ್ತಿದೆ. ನಮ್ಮ ರೈತರಿಗೆ ಅನ್ಯಾಯವಾಗುವುದಕ್ಕೆ ನಾವು ಬಿಡುವುದಿಲ್ಲ. ನೀರಿನ ಖಾತ್ರಿಗಾಗಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದೂ ದೊರೈಮುರುಗನ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT