ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ನೂತನ ಸಿಎಂ: ಕೇಂದ್ರ ನಾಯಕರ ಮಾರ್ಗದರ್ಶನದಲ್ಲಿ ಶೀಘ್ರ ಆಯ್ಕೆ- ಜೋಶಿ

Published 3 ಡಿಸೆಂಬರ್ 2023, 15:00 IST
Last Updated 3 ಡಿಸೆಂಬರ್ 2023, 15:00 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದಲ್ಲಿ ಭಾರಿ ಬಹುಮತದೊಂದಿಗೆ ಬಿಜೆಪಿ ಗೆದ್ದಿರುವ ಬೆನ್ನಲ್ಲೇ, ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುರಿತು ಚರ್ಚೆ ಆರಂಭವಾಗಿದೆ.

‘ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದರ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಪಕ್ಷದ ಕೇಂದ್ರ ನಾಯಕರ ಮಾರ್ಗದರ್ಶನ ಹಾಗೂ ನೂತನವಾಗಿ ಆಯ್ಕೆಯಾಗಿರುವ ಶಾಸಕರೊಂದಿಗೆ ವ್ಯಾಪಕ ಸಮಾಲೋಚನೆ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಕೇಂದ್ರ ಸಚಿವ ಹಾಗೂ ರಾಜಸ್ಥಾನ ಚುನಾವಣಾ ಉಸ್ತುವಾರಿ ಪ್ರಲ್ಹಾದ ಜೋಶಿ ಭಾನುವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಶೀಘ್ರ ಹಾಗೂ ಸುಗಮವಾಗಿ ನಡೆಯಲಿದೆ’ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದಿರುವ ಕುರಿತು ಪ್ರತಿಕ್ರಿಯಿಸಿದ ಜೋಶಿ, ‘ಬಿಆರ್‌ಎಸ್‌ ವಿರುದ್ಧದ ಆಡಳಿತ ವಿರೋಧಿ ಅಲೆಯ ಲಾಭ ಕಾಂಗ್ರೆಸ್‌ಗೆ ಆಗಿದೆ. ತೆಲಂಗಾಣದಲ್ಲಿ ಬಿಜೆಪಿ ಇನ್ನೂ ಬಲಗೊಳ್ಳಬೇಕಿದೆ’ ಎಂದರು.

‘ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿರುವುದು ಹಾಗೂ ಕಾಂಗ್ರೆಸ್‌ನ ಸುಳ್ಳು ಭರವಸೆಗಳನ್ನು ತಿರಸ್ಕರಿಸುವುದನ್ನು ಈ ಮೂರು ರಾಜ್ಯಗಳ ಫಲಿತಾಂಶ ಹೇಳುತ್ತದೆ’ ಎಂದರು.

‘ತಾವು ನೀಡಿರುವ ಗ್ಯಾರಂಟಿಗಳನ್ನು ಮೋದಿ ಈಡೇರಿಸುತ್ತಾರೆ ಎಂಬುದನ್ನು ಜನರು ಒಪ್ಪಿದ್ದಾರೆ . ಇನ್ನೊಂದೆಡೆ, ಕಾಂಗ್ರೆಸ್‌ ಪಕ್ಷ ಭರವಸೆಗಳನ್ನು ಮಾತ್ರ ನೀಡುತ್ತದೆ, ಅವುಗಳನ್ನು ಎಂದಿಗೂ ಈಡೇರಿಸುವುದಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿದೆ’ ಎಂದೂ ಜೋಶಿ ಹೇಳಿದರು.

‘ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರ ‘ಮ್ಯಾಜಿಕ್‌’  ರಾಜ್ಯದಲ್ಲಿ ನಡೆದಿಲ್ಲ. ಬಿಜೆಪಿ ನೀಡಿದ್ದ ಗ್ಯಾರಂಟಿಗಳನ್ನು ಮೋದಿ ಈಡೇರಿಸುವರು ಎಂಬ ಗ್ಯಾರಂಟಿಯನ್ನು ಒಪ್ಪಿಕೊಂಡಿದ್ದಾರೆ’ ಎಂದು ರಾಜಸ್ಥಾನದವರೇ ಆಗಿರುವ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್‌ ಹೇಳಿದರು.

‘ಪಕ್ಷದ ಚುನಾವಣಾ ಉಸ್ತುವಾರಿಯಾಗಿ ಪ್ರಲ್ಹಾದ ಜೋಶಿ ಅದ್ಭುತ ಕೆಲಸ ಮಾಡಿದರು. ಪಕ್ಷದ ಪ್ರತಿಯೊಬ್ಬರ ಅಹವಾಲನ್ನು ಆಲಿಸುವ ಜೊತೆಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದರು’ ಎಂದರು.

ಈ ಹಿಂದೆ ಉತ್ತರಾಖಂಡ ಚುನಾವಣೆ ಉಸ್ತುವಾರಿಯನ್ನು ಸಹ ಜೋಶಿ ಅವರಿಗೆ ನೀಡಲಾಗಿತ್ತು.  ರಾಜಸ್ಥಾನದಲ್ಲಿ ಘಟಾನುಘಟಿ ನಾಯಕರ ಜೊತೆಗೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ದೊಡ್ಡದಿತ್ತು. ಆದರೆ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಪಕ್ಷವನ್ನು ಗೆಲುವಿನ ದಡ ಸೇರಿಸಿದ ಹೆಗ್ಗಳಿಕೆ ಜೋಶಿ ಅವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT