ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲು ಅಪಘಾತಗಳ ಕಾರಣ ಪತ್ತೆಗೆ ತನಿಖೆ; 1 ಲಕ್ಷ ಕಿ.ಮೀ. ಮಾರ್ಗದಲ್ಲಿ ರಕ್ಷಣೆ: ಶಾ

Published : 17 ಸೆಪ್ಟೆಂಬರ್ 2024, 12:56 IST
Last Updated : 17 ಸೆಪ್ಟೆಂಬರ್ 2024, 12:56 IST
ಫಾಲೋ ಮಾಡಿ
Comments

ನವದೆಹಲಿ: ‘ರೈಲು ಅಪಘಾತಕ್ಕಾಗಿ ವಿಧ್ವಂಸಕ ಕೃತ್ಯ ನಡೆಸುವವರ ಸಂಚು ಬಹುಕಾಲ ನಡೆಯುವುದಿಲ್ಲ. ದೇಶದಲ್ಲಿರುವ 1.10 ಲಕ್ಷ ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿನ ಸುರಕ್ಷತೆಗೆ ಸರ್ಕಾರ ಶೀಘ್ರದಲ್ಲಿ ಯೋಜನೆಯನ್ನು ಪರಿಚಯಿಸಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 100 ದಿನಗಳು ಪೂರ್ಣಗೊಂಡ ಸಂದರ್ಭದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಈವರೆಗೂ ನಡೆದಿರುವ ಬಹುತೇಕ ರೈಲು ಅಪಘಾತಗಳ ಹಿಂದೆ ಸಂಚು ರೂಪಿಸಿರುವುದು ಪತ್ತೆಯಾಗಿದೆ. ಈ ಕುರಿತಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಕಳೆದ ಎರಡು ದಿನಗಳಿಂದ ಚರ್ಚೆ ನಡೆಸುತ್ತಿದ್ದೇನೆ’ ಎಂದಿದ್ದಾರೆ.

‘ರೈಲು ಅಪಘಾತಗಳ ಮೂಲ ಕಾರಣವನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುವುದು. ಅದಕ್ಕೆ ಕಾರಣ ಏನೇ ಇರಲಿ, ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಒಂದೊಮ್ಮೆ ಅದು ಸಂಚೇ ಆಗಿದ್ದರೆ, ಅದನ್ನು ಶಾಶ್ವತವಾಗಿ ಕೊನೆಗಾಣಿಸಲಾಗುವುದು. ಒಂದೊಮ್ಮೆ ಸಮನ್ವಯತೆಯ ಕೊರತೆ ಇದ್ದಲ್ಲಿ, ಅದನ್ನು ಸರಿಪಡಿಸಲಾಗುವುದು’ ಎಂದು ಶಾ ಹೇಳಿದ್ದಾರೆ.

‘ರೈಲ್ವೆ ಮಾರ್ಗಗಳ ಸುರಕ್ಷತೆ ಹಾಗೂ ಯಾವುದೇ ಸಂಚು ನಡೆಯದಂತೆ ತಡೆಯಲು ಸಿಬಿಐ, ಎನ್‌ಐಎ, ರೈಲ್ವೆ ಪೊಲೀಸ್ ಹಾಗೂ ಗೃಹ ಸಚಿವಾಲಯವು ನಿರಂತರವಾಗಿ ಶ್ರಮಿಸುತ್ತಿದೆ. ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅವುಗಳನ್ನು ಕೊನೆಗಾಣಿಸಲಾಗುವುದು’ ಎಂದಿದ್ದಾರೆ.

‘ಭಾರತದಲ್ಲಿ ರೈಲ್ವೆ ಸಂಪರ್ಕ ಜಾಲ ವಿಶಾಲವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲೇ. ಮೋದಿ ಅವರ ಮೂರನೇ ಅವಧಿಯ ಮೊದಲ ನೂರು ದಿನಗಳಲ್ಲೇ ಎಂಟು ಹೊಸ ರೈಲು ಮಾರ್ಗಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯು 4.42 ಮಾನವ ದಿನಗಳ ಉದ್ಯೋಗವನ್ನು ಸೃಜಿಸಲಿದೆ’ ಎಂದು ಶಾ ಹೇಳಿದ್ದಾರೆ.

ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲ ನೂರು ದಿನಗಳಲ್ಲಿ 38 ರೈಲ್ವೆ ಅಪಘಾತಗಳು ಸಂಭವಿಸಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಅವೆಲ್ಲವೂ ಸಣ್ಣ ಪ್ರಮಾಣದ್ದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT