ನೊಯಿಡಾ: ‘ಟೆಲಿಗ್ರಾಂ ಮೂಲಕ ಪರಿಚಯವಾದ ಸ್ನೇಹಿತನ ಜೊತೆ ಮದುವೆಯಾಗಲು ಪೋಷಕರು ಒಪ್ಪದ ಹಿನ್ನೆಲೆಯಲ್ಲಿ 24 ವರ್ಷದ ಯುವತಿಯೊಬ್ಬರು ಗುರುವಾರ ತಮ್ಮ ಅಪಾರ್ಟ್‌ಮೆಂಟ್ ಸಮುಚ್ಚಯದ ಎರಡನೇ ಅಂತಸ್ತಿನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿದೆ’ ಎಂದು ಪೊಲೀಸ್ ವಕ್ತಾರರೊಬ್ಬರು ಹೇಳಿದ್ದಾರೆ.
‘ನೊಯಿಡಾದ ಸೆಕ್ಟರ್ 121ರಲ್ಲಿರುವ ಅಜನಾರಾ ಹೋಮ್ಸ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಯುವತಿ ಎಂಬಿಎ ವಿದ್ಯಾರ್ಥಿನಿಯಾಗಿದ್ದು, ಆಕೆ ಮದುವೆಯಾಗಬೇಕೆಂದು ಬಯಸಿದ್ದ 23 ವರ್ಷದ ಯುವಕ ಉತ್ತರಪ್ರದೇಶದ ಬದೌನ್ ಜಿಲ್ಲೆಗೆ ಸೇರಿದವನಾಗಿದ್ದಾನೆ’ ಎಂದು ಅವರು ತಿಳಿಸಿದರು.
‘ಯುವತಿ ಹಾಗೂ ಯುವಕ ಟೆಲಿಗ್ರಾಂ ಮೂಲಕ ಪರಿಚಯವಾಗಿದ್ದರು. ಈ ಸ್ನೇಹದ ಬಗ್ಗೆ ಯುವತಿಯ ಕುಟುಂಬದ ಸದಸ್ಯರಿಗೆ ಗೊತ್ತಾದ ಬಳಿಕ, ಅವರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಗುರುವಾರ ಆಕೆಯ ಮೊಬೈಲ್ ಅನ್ನು ಕಸಿದುಕೊಂಡಿದ್ದರಿಂದ ಕೋಪಗೊಂಡ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಟುಂಬದ ಸದಸ್ಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ವಿವರಿಸಿದರು.
‘ಪ್ರಸ್ತುತ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಕುರಿತು ತಮಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ’ ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.